ಬಡತನದಿಂದ ತುಂಬಿರುವ, ಶೌಚಾಲಯಗಳಿಲ್ಲದ ಭಾರತಕ್ಕೆ ಚಂದ್ರಯಾನ ಬೇಕಾ ಎಂದ ಬಿಬಿಸಿ ನಿರೂಪಕನಿಗೆ ತೀಕ್ಷ್ಣ ಉತ್ತರ ಕೊಟ್ಟ ಆನಂದ ಮಹಿಂದ್ರಾ

ಚಂದ್ರಯಾನ-3 ಬಾಹ್ಯಾಕಾಶ ನೌಕೆ ಚಂದ್ರನ ಮೇಲೆ ಇಳಿದ ಬೆನ್ನಲ್ಲೇ ಬಿಬಿಸಿ ನಿರೂಪಕರೊಬ್ಬರ ಹಳೆಯ ವೀಡಿಯೊವೊಂದು ಮತ್ತೆ ವೈರಲ್‌ ಆಗಿದೆ. ಈ ವೀಡಿಯೊದಲ್ಲಿ ಬಿಬಿಸಿ ನಿರೂಪಕ, ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಭಾರತ ನಿಜವಾಗಿಯೂ ಇಷ್ಟೊಂದು ಹಣವನ್ನು ಖರ್ಚು ಮಾಡಬೇಕೇ ಎಂದು ಪ್ರಶ್ನಿಸಿದ್ದಾರೆ. ಭಾರತದ ಹೆಚ್ಚಿನ ಜನರು ಬಡತನದಲ್ಲಿ ವಾಸಿಸುತ್ತಿದ್ದಾರೆ. 70ಕೋಟಿಗೂ ಹೆಚ್ಚು ಭಾರತೀಯರು ಶೌಚಾಲಯ ಹೊಂದಿಲ್ಲ ಎಂದು ಬಿಬಿಸಿ ನಿರೂಪಕ ವಾದಿಸಿದ್ದಾರೆ. ಈ ಪ್ರಶ್ನೆಗೆ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರ ಗುರುವಾರ ಖಡಕ್‌ ಆಗಿ ಉತ್ತರಿಸಿದ್ದಾರೆ.
ಬಿಬಿಸಿ ಆಂಕರ್ ವೈರಲ್ ವೀಡಿಯೊದಲ್ಲಿ , “ಕೆಲವರು ಈ ಬಗ್ಗೆ ಯೋಚಿಸುತ್ತಿರುವ ಕಾರಣ ನಾನು ನಿಮ್ಮನ್ನು ಕೇಳಬೇಕಾಗಿದೆ ಎಂದು ನಿಮಗೆ ತಿಳಿದಿದೆ. ಭಾರತ, ಸಾಕಷ್ಟು ಮೂಲಸೌಕರ್ಯಗಳ ಕೊರತೆಯಿರುವ ದೇಶ, ಸಾಕಷ್ಟು ಬಡತನ ಹೊಂದಿರುವ ದೇಶ. ನನ್ನ ಪ್ರಕಾರ 700 ಮಿಲಿಯನ್‌ಗಿಂತಲೂ ಹೆಚ್ಚು (70 ಕೋಟಿಗೂ ಹೆಚ್ಚು) ಭಾರತೀಯರಿಗೆ ಶೌಚಾಲಯವಿಲ್ಲ. ನಿಜವಾಗಿಯೂ, ಅವರು ಈ ರೀತಿ ಹಣವನ್ನು ಬಾಹ್ಯಾಕಾಶ ಕಾರ್ಯಕ್ರಮಕ್ಕಾಗಿ ಖರ್ಚು ಮಾಡಬೇಕೇ ಎಂದು ಪ್ರಶ್ನಿಸಿದ್ದರು.

BBC ಆಂಕರ್‌ನ ವೀಡಿಯೊವನ್ನು ಒಳಗೊಂಡಿರುವ ಈ ಟ್ವೀಟ್‌ ಮತ್ತೆ ವೈರಲ್‌ ಆಗಿದ್ದು, ಇದಕ್ಕೆ ಪ್ರತ್ಯುತ್ತರ ನೀಡಿರುವ ಆನಂದ ಮಹಿಂದ್ರಾ, “ನಿಜವಾಗಲೂ ?? ಸತ್ಯವೆಂದರೆ, ನಮ್ಮ ಬಡತನವು ದಶಕಗಳ ವಸಾಹತುಶಾಹಿ ಆಳ್ವಿಕೆಯ ಪರಿಣಾಮವಾಗಿದೆ. ವಸಾಹತುಶಾಹಿ ಇಡೀ ಉಪಖಂಡದ ಸಂಪತ್ತನ್ನು ವ್ಯವಸ್ಥಿತವಾಗಿ ಲೂಟಿ ಮಾಡಿತು. ನಮ್ಮಿಂದ ದೋಚಿದ ಅತ್ಯಮೂಲ್ಯ ಆಸ್ತಿ ಕೊಹಿನೂರ್ ವಜ್ರವಲ್ಲ, ಆದರೆ ನಮ್ಮ ಹೆಮ್ಮೆ ಮತ್ತು ನಮ್ಮ ಸ್ವಂತ ಸಾಮರ್ಥ್ಯಗಳ ಮೇಲಿನ ನಮ್ಮ ನಂಬಿಕೆ ಎಂದು ಆನಂದ ಮಹಿಂದ್ರಾ ಉತ್ತರಿಸಿದ್ದಾರೆ.

“ಏಕೆಂದರೆ ವಸಾಹತುಶಾಹಿಯ ಗುರಿ-ಅದರ ಅತ್ಯಂತ ಕಪಟ ಪ್ರಭಾವ-ಅದರ ಬಲಿಪಶುಗಳಿಗೆ ಅವರ ಕೀಳರಿಮೆಯನ್ನು ಮನವರಿಕೆ ಮಾಡುವುದು. ಅದಕ್ಕಾಗಿಯೇ ಶೌಚಾಲಯಗಳು ಮತ್ತು ಬಾಹ್ಯಾಕಾಶ ಪರಿಶೋಧನೆ ಎರಡರಲ್ಲೂ ಹೂಡಿಕೆ ಮಾಡುವುದು ವಿರೋಧಾಭಾಸವಲ್ಲ. ಸರ್, ಚಂದ್ರನಿಗೆ ಹೋಗುವುದು ನಮಗೆ ಏನು ಮಾಡುತ್ತದೆ ಎಂದರೆ ಅದು ನಮ್ಮ ಹೆಮ್ಮೆ ಮತ್ತು ಆತ್ಮವಿಶ್ವಾಸವನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ. ಇದು ವಿಜ್ಞಾನದ ಮೂಲಕ ಪ್ರಗತಿಯಲ್ಲಿ ನಂಬಿಕೆಯನ್ನು ಸೃಷ್ಟಿಸುತ್ತದೆ. ಇದು ನಮ್ಮನ್ನು ಬಡತನದಿಂದ ಹೊರತರುವ ಆಕಾಂಕ್ಷೆಯನ್ನು ನೀಡುತ್ತದೆ. ಮಹಾನ್ ಬಡತನವೆಂದರೆ ಆಕಾಂಕ್ಷೆಯ ಬಡತನ … ಎಂದು ಖಡಕ್‌ ಆಗಿ ಉತ್ತರಿಸಿದ್ದಾರೆ.
ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಮೊದಲ ದೇಶ ಭಾರತವಾಗಿದೆ. ಅಷ್ಟೇ ಅಲ್ಲ, ರಷ್ಯಾ, ಅಮೆರಿಕ ಮತ್ತು ಚೀನಾ ನಂತರ ಚಂದ್ರನ ಮೇಲೆ ಇಳಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾದ ಭಾರತ ಬುಧವಾರ ಇತಿಹಾಸ ನಿರ್ಮಿಸಿದೆ.

ಪ್ರಮುಖ ಸುದ್ದಿ :-   ಪವಿತ್ರಾ ಜಯರಾಮ ಸಾವಿನ ಬೆನ್ನಲ್ಲೇ ಗೆಳೆಯ-ಕಿರುತೆರೆ ನಟ ಚಂದು ಆತ್ಮಹತ್ಯೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement