ಇಸ್ರೋ ಕೇಂದ್ರಕ್ಕೆ ಭೇಟಿ: ರಾಜಕಾರಣ, ರಾಜಕೀಯ ನಾಯಕರನ್ನು ದೂರವಿಟ್ಟ ಪ್ರಧಾನಿ ಮೋದಿ

ಬೆಂಗಳೂರು : ಚಂದ್ರಯಾನ-3 ರ ಯಶಸ್ಸಿನ ನಿಮಿತ್ತ ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಭೇಟಿ ನೀಡಿದ್ದಾರೆ.
ಆದರೆ ಈ ಭೇಟಿಯನ್ನು ರಾಜಕೀಯ ಕಾರ್ಯಕ್ರಮವಾಗದಂತೆ ಸಂಪೂರ್ಣವಾಗಿ ನೋಡಿಕೊಂಡಿದ್ದಾರೆ. ಈ ವಿಷಯದಲ್ಲಿ ಸಾಕಷ್ಟು ಎಚ್ಚರಿಕೆಯ ಹೆಜ್ಜೆ ಇಟ್ಟ ಪ್ರಧಾನಿ, ಬೆಂಗಳೂರಿನ ತಮ್ಮ ಇಸ್ರೋ ಭೇಟಿಯಲ್ಲಿ ಎಲ್ಲಿಯೂ ರಾಜಕೀಯ ಪಕ್ಷಗಳ ನಾಯಕರುಗಳಿಗೆ ಆಸ್ಪದ ನೀಡಲಿಲ್ಲ.
ಎಚ್​ಎಎಲ್​ ಏರ್ಪೋರ್ಟ್​ಗೆ ಬಂದಿಳಿದಾಗ ಮೋದಿ ಅವರ ಸ್ವಾಗತಕ್ಕೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಅಧಿಕಾರಿಗಳು ಹಾಗೂ ವಿಜ್ಞಾನಿಗಳಷ್ಟೇ ಇದ್ದರು. ಮೋದಿ ಅವರನ್ನು ಶಿಷ್ಟಾಚಾರದ ಪ್ರಕಾರ ಅವರನ್ನು ಸ್ವಾಗತಿಸುವುದಕ್ಕೆ ಮುಖ್ಯಮಂತ್ರಿಗಳು ಹಾಗೂ ಸಚಿವರು ಏರ್‌ಪೋರ್ಟ್‌ಗೆ ಹೋಗಿರಲಿಲ್ಲ, ಇಸ್ರೋ ಭೇಟಿಯ ಹಿನ್ನೆಲೆಯಲ್ಲಿ ಪಿಎಂ ಕಚೇರಿ ಸೂಚನೆಯಂತೆ ಯಾವುದೇ ರಾಜಕೀಯ ಪ್ರತಿನಿಧಿಗಳು ಸ್ವಾಗತಕ್ಕೆ ತೆರಳಿರಲಿಲ್ಲ. ಅಷ್ಟೇ ಅಲ್ಲದೆ ಸ್ವತಃ ಬಿಜೆಪಿ ನಾಯಕರೂ ಕೂಡಾ ಅಲ್ಲಿ ಕಾಣಿಸಿಕೊಂಡಿರಲಿಲ್ಲ.

ಎಚ್​ಎಎಲ್​ ಏರ್ಪೋರ್ಟ್ ಹೊರಭಾಗದಲ್ಲಿ ಬಿಜೆಪಿ ನಾಯಕರು ಕಾದುಕುಳಿತಿದ್ದರೂ ಪ್ರಧಾನಿಯವರು ಅವರನ್ನು ಭೇಟಿಯಾಗಲಿಲ್ಲ. ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ಶಾಸಕರಾದ ಭೈರತಿ ಬಸವರಾಜ, ಮಂಜುಳಾ, ಛಲವಾದಿ ನಾರಾಯಣಸ್ವಾಮಿ ಇವರು ಏರ್​​ಪೋರ್ಟ್ ಮುಂಭಾಗ ಜನರ ಜತೆ ಧ್ವಜ ಹಿಡಿದು ಸ್ವಾಗತಿಸಿದರೆ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನಕುಮಾರ ಕಟೀಲು, ಆರ್‌. ಅಶೋಕ, ಮುನಿರಾಜು ಮೊದಲಾದವರು ರಸ್ತೆ ಬದಿ ನಿಂತು ಸ್ವಾಗತ ಕೋರಿದರು. ದೆಹಲಿಗೆ ವಾಪಸಾಗುವವರೆಗೂ ಮೋದಿ ಯಾವ ಬಿಜೆಪಿ ನಾಯಕರನ್ನೂ ಭೇಟಿಯಾಗಲಿಲ್ಲ.
ಹೆಚ್​ಎಎಲ್​ ಏರ್ಪೋರ್ಟ್​​ನಿಂದ ಹೊರಬರುತ್ತಿದ್ದಂತೆಯೇ ತುಸು ಹೊತ್ತು ಅಲ್ಲಿದ್ದ ಜನರನ್ನು ಉದ್ದೇಶಿಸಿ ಮಾತನಾಡಲು ಮೋದಿ ಮುಂದಾದರು. ಅಷ್ಟರಲ್ಲಿ ಅಲ್ಲಿದ್ದವರು ಜೈ ಮೋದಿ ಎಂಬ ಘೋಷಣೆ ಕೂಗಲು ಮುಂದಾದರು. ತಕ್ಷಣವೇ ಮಧ್ಯ ಪ್ರವೇಶಿಸಿದ ಮೋದಿ, ‘ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್, ಜೈ ಅನುಸಂಧಾನ್’ ಘೋಷಣೆ ಕೂಗಿದರು. ಅದೇ ರೀತಿ ಹೇಳುವಂತೆ ಜನರನ್ನು ಪ್ರೇರೇಪಿಸಿದರು.

ಪ್ರಮುಖ ಸುದ್ದಿ :-   ಸವದತ್ತಿ | ಸಿಡಿಲು ಬಡಿದು ಇಬ್ಬರು ಸಾವು

ಅಲ್ಲದೆ, ಮೋದಿ ಸ್ವಾಗತಕ್ಕೆ ಬಂದ ನಾಯಕರು, ಸಾರ್ವಜನಿಕರ ಬಳಿ ರಾಷ್ಟ್ರಧ್ವಜಗಳು ಮಾತ್ರ ಇರುವಂತೆ ಸೂಚಿಸಲಾಗಿತ್ತು. ಹೀಗಾಗಿ ಯಾವುದೇ ಬಿಜೆಪಿ ಧ್ವಜಗಳು ಅಲ್ಲಿ ರಾರಾಜಿಸುತ್ತಿರಲಿಲ್ಲ. ಒಂದು ಹಂತದಲ್ಲಿ ಮೋದಿ ಅವರ ಇಸ್ರೋ ಭೇಟಿ ವೇಳೆ ರೋಡ್ ಶೋ ನಡೆಸಲು ಬಿಜೆಪಿ ಉದ್ದೇಶಿಸಿದ್ದರೂ ಇಸ್ರೋ ಭೇಟಿ ರಾಜಕೀಯ ಕಾರ್ಯಕ್ರಮವಾಗಬಾರದು ಎಂದು ಅದಕ್ಕೆ ಅನುಮತಿ ಸಿಗಲಿಲ್ಲ.
ಮೋದಿ ತಮ್ಮ ಮೊದಲ ಭಾಷಣದಲ್ಲಿ ಮತ್ತು ಇಸ್ರೋ ಕಚೇರಿಯಲ್ಲಿನ ಭಾಷಣದಲ್ಲಿ ರಾಜಕೀಯ ಬೆರೆಸದೆ ಸಂಪೂರ್ಣವಾಗಿ ವಿಜ್ಞಾನಿ, ವಿಜ್ಞಾನ, ಇಸ್ರೋ ಹೊರತಾಗಿ ಬೇರೇನೂ ಮಾತನಾಡಲು ಹೋಗಿರಲಿಲ್ಲ. ಹೆಚ್​​ಎಎಲ್​ಗೆ ಹಿಂತಿರುಗಿ ದೆಹಲಿಗೆ ವಾಪಸ್ ಆಗುವ ಮಾರ್ಗದಲ್ಲಿಯೂ ಅಷ್ಟೆ, ಮೋದಿ ಅವರು ಬಿಜೆಪಿ ನಾಯಕರನ್ನು ಭೇಟಿಯಾಗಲಿಲ್ಲ.

3.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement