ಸಿಎಂ ಸಿದ್ದರಾಮಯ್ಯ ಸರ್ಕಾರದ ಎಲ್ಲ 33 ಸಚಿವರಿಗೆ ಹೊಸ ಐಷಾರಾಮಿ ಕಾರಿನ ಭಾಗ್ಯ…

ಬೆಂಗಳೂರು : ಸಂಪುಟದ 33 ಸಚಿವರಿಗಾಗಿ ಸಿದ್ದರಾಮಯ್ಯ ಸರ್ಕಾರವು ಹೊಸ ಕಾರು ಖರೀದಿಸಲು ಆದೇಶ ನೀಡಿದ್ದು, ಪ್ರತಿಯೊಬ್ಬ ಸಚಿವರಿಗೂ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಹೊಸ ಇನೋವಾ ಹೈಬ್ರಿಡ್ ಕಾರು ಶೀಘ್ರದಲ್ಲೇ ದೊರಕಲಿದೆ.
ಹೊಸ ಕಾರುಗಳನ್ನು ಖರೀದಿಸಲು ಕರ್ನಾಟಕ ಸರ್ಕಾರವು 9.9 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದ ಎಲ್ಲ 33 ಸಚಿವರು ಅತ್ಯಾಧುನಿಕ ಕಾರು ಪಡೆಯಲಿದ್ದಾರೆ. ಈ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ.
ಪ್ರತಿ ಸಚಿವರಿಗೆ ಒಂದರಂತೆ ಇತ್ತೀಚೆಗೆ ಬಿಡುಗಡೆಯಾದ ಟೊಯೋಟಾ ಕಂಪನಿಯ ಇನ್ನೋವಾ ಹೈಬ್ರಿಡ್ ಹೈಕ್ರಾಸ್​ ಮಾಡೆಲ್​ನ 33 ಕಾರುಗಳನ್ನು ಖರೀದಿಸಲು ಸರ್ಕಾರ ಮುಂದಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಬಿಡುಗಡೆ ಮಾಡಿರುವ ಆದೇಶದ ಪ್ರಕಾರ, ಪ್ರತಿ ಕಾರಿಗೆ ಸುಮಾರು 30 ಲಕ್ಷ ರೂಪಾಯಿ (ಜಿಎಸ್‌ಟಿ ಸೇರಿದಂತೆ ಎಕ್ಸ್ ಶೋರೂಂ ದರ) ವೆಚ್ಚವಾಗಲಿದೆ ಎಂದು ವರದಿಯಾಗಿದೆ.
ಕರ್ನಾಟಕ ಸಾರ್ವಜನಿಕ ಖರೀದಿಯಲ್ಲಿನ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯ ಸೆಕ್ಷನ್ 4 (ಜಿ) ಅಡಿಯಲ್ಲಿ ಸರ್ಕಾರವು ನೇರವಾಗಿ ಟೊಯೋಟಾ ಕಿರ್ಲೋಸ್ಕರ್ ಬೆಂಗಳೂರು ಘಟಕದಿಂದ ಕಾರುಗಳನ್ನು ಖರೀದಿಸಲು ಮುಂದಾಗಿದ್ದು, ಈ ಕಾರುಗಳು ಆಗಸ್ಟ್‌ 29 ರಂದು ಬಿಡುಗಡೆಯಾದ ವಿಶ್ವದ ಮೊದಲ ಸಂಪೂರ್ಣ ಎಥೆನಾಲ್ ಚಾಲಿತ ಫ್ಲೆಕ್ಸ್ ಇಂಧನ ಎಂಜಿನ್ ಹೊಂದಿವೆ. ಈ ಕಾರು ಎಂಟು ವಿವಿಧ ರೀತಿಯ ಬೆಲೆಯಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಬೆಲೆ 18 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ.

ಪ್ರಮುಖ ಸುದ್ದಿ :-   ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಡಿಸಿಪಿ ತಲೆದಂಡ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement