ಚಂದ್ರಯಾನ-3ರ ಉಡಾವಣೆ ಕೌಂಟ್‌ಡೌನ್‌ಗೆ ಧ್ವನಿ ನೀಡಿದ್ದ ಇಸ್ರೋ ವಿಜ್ಞಾನಿ ವಲರ್ಮತಿ ಹೃದಯಾಘಾತದಿಂದ ನಿಧನ

ಬೆಂಗಳೂರು : ಶ್ರೀಹರಿಕೋಟಾದಲ್ಲಿ ರಾಕೆಟ್ ಉಡಾವಣೆಗಾಗಿ ಕ್ಷಣಗಣನೆಯಲ್ಲಿ ಧ್ವನಿ ನೀಡುತ್ತಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿ ವಲರ್ಮತಿ ಅವರು ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ.
ದೇಶದ ಮೂರನೇ ಚಂದ್ರಯಾನವಾದ ಚಂದ್ರಯಾನ-3 (Chandrayaan-3) ರಾಕೆಟ್ ಉಡಾವಣೆಯ ಸಂದರ್ಭದಲ್ಲೂ ಸಹಾ ಕೌಂಟ್‌ಡೌನ್‌ಗೆ ಅವರು ಧ್ವನಿ ನೀಡಿದ್ದು, ಇಸ್ರೋದಲ್ಲಿ ಅದು ಅವರ ಕೊನೆಯ ಧ್ವನಿಯಾಗಿತ್ತು. ಜುಲೈ 14 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಅನ್ನು ಉಡಾವಣೆ ಮಾಡಲಾಯಿತು.

ವರದಿಗಳ ಪ್ರಕಾರ, ಅವರು ಹೃದಯಾಘಾತದಿಂದ ಶನಿವಾರ ಸಂಜೆ ಚೆನ್ನೈನಲ್ಲಿ ನಿಧನರಾದರು. ತಮಿಳುನಾಡಿನ ಅರಿಯಲೂರು ಮೂಲದವರಾದ ವಲರ್ಮತಿ ಅವರು ಜುಲೈ 31, 1959 ರಂದು ಜನಿಸಿದರು. ಅವರು ಕೊಯಮತ್ತೂರಿನ ಸರ್ಕಾರಿ ಕಾಲೇಜ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದರು.
ವಿಜ್ಞಾನಿ 1984 ರಲ್ಲಿ ಇಸ್ರೋಗೆ ಸೇರಿದರು ಮತ್ತು ಹಲವಾರು ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು RISAT-1, ಭಾರತದ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ರಾಡಾರ್ ಇಮೇಜಿಂಗ್ ಉಪಗ್ರಹ (RIS) ಮತ್ತು ದೇಶದ ಎರಡನೇ ಅಂತಹ ಉಪಗ್ರಹದ ಯೋಜನಾ ನಿರ್ದೇಶಕರಾಗಿದ್ದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : ಕಾಂಗ್ರೆಸ್​​​ಗೆ ಮತ್ತೊಂದು ಶಾಕ್ ; ಸ್ಪರ್ಧಿಸಲು ನಿರಾಕರಿಸಿ ಟಿಕೆಟ್‌ ವಾಪಸ್‌ ಮಾಡಿದ ಕಾಂಗ್ರೆಸ್​​ ಅಭ್ಯರ್ಥಿ...!

2015 ರಲ್ಲಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಗೌರವಾರ್ಥವಾಗಿ ತಮಿಳುನಾಡು ಸರ್ಕಾರವು ಸ್ಥಾಪಿಸಿದ ಅಬ್ದುಲ್ ಕಲಾಂ ಪ್ರಶಸ್ತಿಯನ್ನು ಪಡೆದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಅವರ ನಿಧನಕ್ಕೆ ಇಸ್ರೋದ ಮಾಜಿ ನಿರ್ದೇಶಕರಾದ ಡಾ.ಪಿ.ವಿ.ವೆಂಕಟಕೃಷ್ಣನ್ ಅವರು ಟ್ವಿಟ್ಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ. ಶ್ರೀಹರಿಕೋಟಾದಿಂದ ಇಸ್ರೋದ ಭವಿಷ್ಯದ ಮಿಷನ್‌ಗಳ ಕೌಂಟ್‌ಡೌನ್‌ಗಳಿಗೆ ವಲರ್ಮತಿ ಮೇಡಂ ಅವರ ಧ್ವನಿ ಇರುವುದಿಲ್ಲ. ಚಂದ್ರಯಾನ-3 ಅವರ ಅಂತಿಮ ಕೌಂಟ್‌ಡೌನ್ ಘೋಷಣೆಯಾಗಿತ್ತು. ಅವರು ಅನಿರೀಕ್ಷಿತವಾಗಿ ನಿಧನರಾಗಿದ್ದಾರೆ ಎಂದು ಸಂತಾಪ ಸೂಚಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement