ಬರಪೀಡಿತ ತಾಲೂಕುಗಳಲ್ಲಿ ಹಣದ ಬದಲು 10 ಕೆ.ಜಿ ಅಕ್ಕಿ ವಿತರಣೆ : ಸಚಿವ ಮುನಿಯಪ್ಪ

ಬೆಂಗಳೂರು: ರಾಜ್ಯದ ಬರ ಪೀಡಿತ ತಾಲೂಕುಗಳಿಗೆ ಹಣದ ಬದಲು 10 ಕೆಜಿ ಅಕ್ಕಿ ನೀಡಲಾಗುವುದು ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಪ್ರಕಟಿಸಿದ್ದಾರೆ.
ಈ ಕುರಿತು ಸೋಮವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆಯ ಕೊರತೆ ಎದುರಾಗಿದೆ. ನೀರಿಲ್ಲದೆ ಬರ ಆವರಿಸಿದೆ. ಬೆಳೆ ಹಾನಿಯಿಂದ ರೈತರು ಕಂಗಾಲಾಗಿದ್ದಾರೆ. ರಾಜ್ಯದ ಬರಪೀಡಿತ ತಾಲೂಕುಗಳಿಗೆ ಹಣದ ಬದಲು 10 ಕೆ.ಜಿ ಅಕ್ಕಿ ನೀಡಲಾಗುವುದು. ಬರಪೀಡಿತ ತಾಲ್ಲೂಕುಗಳ ಪಟ್ಟಿ ಘೋಷಣೆ ಆಗುತ್ತಿದ್ದಂತೆ ಹತ್ತು ಕೆಜಿ ಅಕ್ಕಿ ಪೂರೈಕೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇನ್ನೊಂದು ವಾರದಲ್ಲಿ ಹತ್ತು ಕೆಜಿ ಅಕ್ಕಿ ಪೂರೈಕೆ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಆಂಧ್ರ, ತೆಲಂಗಾಣ ಮತ್ತು ಛತ್ತೀಸ್ಗಢ ರಾಜ್ಯಗಳು ಅಕ್ಕಿ ಕೊಡಲು ಮುಂದೆ ಬಂದಿವೆ. ದರದ ಚರ್ಚೆ ನಡೆಯುತ್ತಿದೆ. ಹತ್ತು ದಿನದಲ್ಲಿ ಎಲ್ಲವೂ ಅಂತಿಮವಾಗಬಹುದು. ಎಫ್‌ಸಿಐ ದರದಲ್ಲೇ ಇಲ್ಲೂ ಅಕ್ಕಿ ಖರೀದಿಸಬೇಕು ಎಂಬ ಲೆಕ್ಕಾಚಾರದಲ್ಲಿ ಚರ್ಚೆ ನಡೆಯುತ್ತಿದೆ ಎಂದು ಅವರು ಹೇಳಿದರು.

ಡಿಬಿಟಿ (ನೇರ ನಗದು ವರ್ಗಾವಣೆ) ವಿಚಾರದಲ್ಲಿ ಮಾಧ್ಯಮಗಳಿಗೆ ತಪ್ಪು ಮಾಹಿತಿ ಹೋಗಿದೆ. ಜುಲೈ ತಿಂಗಳಿನಲ್ಲಿ 97 ಲಕ್ಷ ಕಾರ್ಡ್‌ದಾರರಿಗೆ ಡಿಬಿಟಿ ಮಾಡಿದ್ದೇವೆ. 3.45 ಕೋಟಿ ಜನರಿಗೆ 566 ಕೋಟಿ ರೂಪಾಯಿ ಬೇಕಾಗುತ್ತದೆ. ಆಗಸ್ಟ್ ತಿಂಗಳಲ್ಲಿ 3.69 ಕೋಟಿ ಜನರಿಗೆ 606 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದ್ದೇವೆ. ಬ್ಯಾಂಕ್ ಅಕೌಂಟ್ ಇಲ್ಲದವರು 21 ಲಕ್ಷ ಜನರಿದ್ದಾರೆ. 2 ಲಕ್ಷ ಜನರಿಗೆ ನಾವೇ ಬ್ಯಾಂಕ್ ಅಕೌಂಟ್ ಮಾಡಿದ್ದೇವೆ. 14 ಲಕ್ಷ ಜನರಿಗೆ ನಾವೇ ಅಕೌಂಟ್ ಮಾಡಲಾಗುತ್ತಿದೆ. ಇದರಿಂದ ಯಾರಿಗೂ ಅನ್ಯಾಯ ಆಗುವುದಿಲ್ಲ ಎಂದು ತಿಳಿಸಿದರು.
ಉದಯನಿಧಿ ಸ್ಟಾಲಿನ್ ಹೇಳಿಕೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಅವರ ವೈಯಕ್ತಿಕ ಅಭಿಪ್ರಾಯ. ಭಾರತದ ವ್ಯವಸ್ಥೆ ಹೇಗಿದೆ, ನಮ್ಮ ಸಂವಿಧಾನ ಏನು ಹೇಳುತ್ತದೆ ಅದರಂತೆ ನಾವು ನಡೆಯಬೇಕು. ಭಾರತ ಯಾವುದೇ ಒಂದು ಧರ್ಮಕ್ಕೆ ಸೇರಿದ ರಾಷ್ಟ್ರವಲ್ಲ. ಸಾವಿರಾರು ವರ್ಷಗಳಿಂದ ಎಲ್ಲ ಧರ್ಮದವರು ಬಾಳುತ್ತ ಬಂದಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲಾ ಧರ್ಮದವರು ಭಾಗಿಯಾಗಿದ್ದಾರೆ. ಅದು ವೈಯಕ್ತಿಕ ಅಭಿಪ್ರಾಯವಾಗಿದೆ. ಸಂವಿಧಾನದ ಚೌಕಟ್ಟಿನಲ್ಲಿಯೇ ನಾವೆಲ್ಲ ನಡೆಯಬೇಕಾಗಿದೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಕರ್ನಾಟಕ ಬಿಜೆಪಿ ಹಂಚಿಕೊಂಡ ಅನಿಮೇಟೆಡ್ ವೀಡಿಯೊ ತೆಗೆದುಹಾಕಿ ; ಎಕ್ಸ್​ ಗೆ ಚುನಾವಣಾ ಆಯೋಗ ಸೂಚನೆ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement