ನವದೆಹಲಿ : ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್ 15 ದಿನಗಳ ಕಾಲ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚಿಸಿದೆ.
ಅರ್ಜಿ ವಿಚಾರಣೆ ನಡೆಸಿದ ಬಿ.ಆರ್ ಗವಾಯಿ ನೇತೃತ್ವದ ತ್ರಿ ಸದಸ್ಯ ಪೀಠವು, ಕಾವೇರಿ ನಿಯಂತ್ರಣ ಆಯೋಗ ಮತ್ತು ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶಗಳು ಮತ್ತು ಶಿಫಾರಸುಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಲಾಗುವುದಿಲ್ಲ. ಎರಡು ಸಮಿತಿಗಳ ಆದೇಶವನ್ನು ಒಪ್ಪಬೇಕಾಗುತ್ತದೆ. ಎರಡು ಸಮಿತಿಗಳ ಆದೇಶವನ್ನು ಕರ್ನಾಟಕ ಪಾಲಿಸಬೇಕು, ಹೀಗಾಗಿ ಕರ್ನಾಟಕ ನೀರು ಹರಿಸಬೇಕು ಎಂದು ಹೇಳಿದೆ.
ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ 5000 ಕ್ಯೂಸೆಕ್ಸ್ ನೀರು ಬಿಡಬೇಕು. ಇದಾದ ನಂತರ ನೀರಿನ ಲಭ್ಯತೆಯ ವಾಸ್ತವಾಂಶವನ್ನು ನೋಡಿಕೊಂಡು ಮುಂದಿನ ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದೆ.
ಇದೇವೇಳೆ ಪ್ರಸ್ತುತ ನೀರನ್ನು ದಿನಕ್ಕೆ 5,000 ರಿಂದ 7,200 ಕ್ಯೂಸೆಕ್‌ಗಳಿಗೆ ಹೆಚ್ಚಿಸಲು ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ತಮಿಳುನಾಡು ಸರ್ಕಾರವು ನೆರೆಯ ರಾಜ್ಯವು “ತನ್ನ ನಿಲುವು ಬದಲಿಸಿದೆ” ಎಂದು ಹೇಳಿಕೊಂಡಿದೆ ಮತ್ತು ಮೊದಲು ಒಪ್ಪಿಕೊಂಡಿದ್ದ 15,000 ಕ್ಯೂಸೆಕ್‌ಗೆ ಬದಲಾಗಿ 8,000 ಕ್ಯೂಸೆಕ್‌ಗಳಷ್ಟು ಕಡಿಮೆ ಪ್ರಮಾಣದ ನೀರನ್ನು ಬಿಡುಗಡೆ ಮಾಡಿದೆ ಎಂದು ವಾದಿಸಿದೆ.
ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ, ಪಿ.ಎಸ್.ನರಸಿಂಹ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರ ಪೀಠವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಈ ಅಂಶದ ಕುರಿತು ನೀಡಿದ ಆದೇಶದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ವಿಶೇಷವಾಗಿ ಈ ಪ್ರಾಧಿಕಾರವು ಪ್ರತಿ ಹದಿನೈದು ದಿನಗಳಿಗೊಮ್ಮೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ಹೇಳಿದೆ.
ಮುಂಗಾರು ವೈಫಲ್ಯದಿಂದ ಸಂಕಷ್ಟದ ಸ್ಥಿತಿ ಇರುವುದರಿಂದ ತಮಿಳುನಾಡು ಸರ್ಕಾರದ ಮನವಿಯನ್ನು ತಪ್ಪಾಗಿ ಗ್ರಹಿಸಲಾಗಿದೆ ಎಂದು ಕರ್ನಾಟಕ ಸರ್ಕಾರವು ಅಫಿಡವಿಟ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಇದಲ್ಲದೆ, ತಮಿಳುನಾಡು 69.777 ಟಿಎಂಸಿ (ಸಾವಿರ ಮಿಲಿಯನ್ ಕ್ಯೂಬಿಕ್ ಅಡಿ) ನೀರನ್ನು ಅತಿಯಾಗಿ ಸೆಳೆಯುವ ಮೂಲಕ ನೀರಿನ ಕ್ಯಾರಿ-ಓವರ್ ಶೇಖರಣೆಯನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಅದು ಹೇಳಿಕೊಂಡಿದೆ.
ಕರ್ನಾಟಕ ಪರ ವಾದ ಮಂಡಿಸಿದ ಶ್ಯಾಮ್ ದಿವಾನ್, ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿರುವ ಆದೇಶವನ್ನು ನಾವು ಪಾಲಿಸಿದ್ದೇವೆ ಎಂದು ಹೇಳಿದರು. ಕರ್ನಾಟಕ ಹಾಗೂ ತಮಿಳುನಾಡಿನ ವಾದ-ವಿವಾದಗಳನ್ನು ಆಲಿಸಿದ ತ್ರಿಸದಸ್ಯ ಪೀಠ ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶಿಸಿತು.
ನಿಮ್ಮ ಕಾಮೆಂಟ್ ಬರೆಯಿರಿ