ಗದಗ: ಉದ್ಯಮಿ ಗೋಪಾಲ ಬಾಬು ಪೂಜಾರಿಗೆ ಬಿಜೆಪಿಯಿಂದ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂ. ಪಡೆದು ವಂಚನೆ ಎಸಗಿದ ಆರೋಪದಲ್ಲಿ ಬಂಧಿಯಾಗಿರುವ ಅಭಿನವ ಹಾಲಶ್ರೀ ಸ್ವಾಮೀಜಿ ವಿರುದ್ಧ ಈಗ ಮತ್ತೊಂದು ವಂಚನೆ ಆರೋಪ ಕೇಳಿಬಂದಿದೆ.
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ರಣತೂರು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಯಾಗಿದ್ದ ಸಂಜಯ ಚವಡಾಳ ಅವರು ಅಭಿನವ ಸ್ವಾಮೀಜಿ ವಿರುದ್ಧ ವಂಚನೆ ಆರೋಪ ಮಾಡಿ, ಸೆಪ್ಟಂಬರ್ 19 ರಂದು ಮುಂಡರಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸಂಜಯ ಚವಡಾಳ ಅವರು ರಾಜ್ಯ ವಿಧಾನಸಭಾ ಚುನಾವಣೆ ಸಮಯದಲ್ಲಿ ಶಿರಹಟ್ಟಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ಕೊಡಿಸುವುದಾಗಿ ನಂಬಿಸಿ ಚುನಾವಣೆಗೆ ಮುಂಚಿತವಾಗಿ ತನ್ನಿಂದ ಸ್ಮಾಮೀಜಿ 1 ಕೋಟಿ ರೂ. ಹಣ ಪಡೆದಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮದವರಾದ ಸಂಜಯ್ ಚವಡಾಳ, ʼಅರುಂಧತಿ ಫೌಂಡೇಷನ್ʼ ಹೆಸರಲ್ಲಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಬಿಜೆಪಿ ವರಿಷ್ಠರೊಂದಿಗೆ ನಿಕಟ ಸಂಪರ್ಕದಲ್ಲಿರುವುದಾಗಿ ಅಭಿನವ ಹಾಲವೀರಪ್ಪ ಸ್ವಾಮೀಜಿ ತಮ್ಮನ್ನು ಬಿಂಬಿಸಿಕೊಂಡಿದ್ದರಿಂದ ಸಂಜಯ ಚವಡಾಳ ಸ್ವಾಮೀಜಿಯನ್ನು ಪರಿಚಯ ಮಾಡಿಕೊಂಡಿದ್ದರು. ಶಿರಹಟ್ಟಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವಂತೆ ಅವರಿಗೆ ಕೋರಿದ್ದರು. ಅದಕ್ಕಾಗಿ 50 ಲಕ್ಷ, 40 ಲಕ್ಷ ಮತ್ತು 10 ಲಕ್ಷದಂತೆ ವಿವಿಧ ಕಂತುಗಳಲ್ಲಿ 1 ಕೋಟಿ ರೂ. ಹಣವನ್ನು ಸ್ವಾಮೀಜಿಗೆ ನೀಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ