ಜೈಪುರ : ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಇರುವಾಗ ಈಗ ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಜಾತಿ ಸಮೀಕ್ಷೆ ನಡೆಸಲು ಆದೇಶಿಸಿದೆ.
ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಯಾವುದೇ ಕ್ಷಣದಲ್ಲಿ ದಿನಾಂಕ ಘೋಷಣೆಯಾಗುವ ನಿರೀಕ್ಷೆ ಇದೆ. ಈ ವೇಳೆ ರಾಜಸ್ಥಾನದ ಅಶೋಕ ಗೆಹ್ಲೋಟ್ ಸರ್ಕಾರ ಜಾತಿ ಸಮೀಕ್ಷೆ ನಡೆಸಲು ಆದೇಶ ಹೊರಡಿಸಿದೆ. ಎಲ್ಲಾ ಸಮುದಾಯಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ತಿಳಿಯಲು ಜಾತಿ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಆದೇಶ ಹೇಳಿದೆ.
ಸರ್ಕಾರದಿಂದ ಆದೇಶ; ಜಾತಿ ಸಮೀಕ್ಷೆ ನಡೆಸುವ ಕುರಿತು ರಾಜಸ್ಥಾನದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಶನಿವಾರ ಆದೇಶ ಹೊರಡಿಸಿದೆ. ಎಲ್ಲಾ ಸಮುದಾಯಗಳ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿ ತಿಳಿಯಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ. ಯೋಜನಾ ನಿರ್ದೇಶನಾಲಯ (ಆರ್ಥಿಕ ಮತ್ತು ಸಾಂಖ್ಯಿಕ)ವನ್ನು ಈ ಜಾತಿ ಸಮೀಕ್ಷೆಗೆ ನೋಡೆಲ್ ಏಜೆನ್ಸಿಯಾಗಿ ನೇಮಿಸಲಾಗಿದೆ. ಆದರೆ ಸರ್ಕಾರ ತನ್ನ ಆದೇಶದಲ್ಲಿ ಜಾತಿ ಸಮೀಕ್ಷೆ ವರದಿಯನ್ನು ಯಾವಾಗ ನೀಡಬೇಕು ಎಂಬ ಬಗ್ಗೆ ಗಡುವು ನೀಡಿಲ್ಲ.
ಜಾತಿ ಸಮೀಕ್ಷೆ ನಡೆಸುವ ಆದೇಶವನ್ನು ಟ್ವೀಟ್ ಮಾಡಿರುವ ರಾಜಸ್ಥಾನದ ಆಡಳಿತ ಪಕ್ಷ ಕಾಂಗ್ರೆಸ್, “ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಜಾತಿ ಸಮೀಕ್ಷೆಯನ್ನು ನಡೆಸಲಿದೆ. ಪಕ್ಷ ತನ್ನ ಬದ್ಧತೆಗಳಿಗೆ ತಕ್ಕಂತೆ ಹೆಜ್ಜೆ ಇಟ್ಟಿದೆ” ಎಂದು ಹೇಳಿದೆ.
ಶನಿವಾರ ಬೆಳಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್, “ಜಾತಿ ಸಮೀಕ್ಷೆ ನಡೆಸಲು ಶೀಘ್ರದಲ್ಲೇ ಆದೇಶ ಪ್ರಕಟವಾಗಲಿದೆ. ನಾವು ಸಮೀಕ್ಷೆ ಮಾಡುತ್ತೇವೆ. ಇದು ಸಮೀಕ್ಷೆಯಾಗಿದೆ. ಗಣತಿ ನಡೆಸುವುದು ಕೇಂದ್ರ ಸರ್ಕಾರ. ಕುಟುಂಬಗಳ ಸ್ಥಿತಿಗತಿಯನ್ನು ತಿಳಿಯಲು ಸಮೀಕ್ಷೆ ನಡೆಸಲಾಗುತ್ತದೆ. ಇದು ನಮ್ಮ ಪಕ್ಷದ ಬದ್ಧತೆಯಾಗಿದೆ. ಸಮೀಕ್ಷೆ ನಡೆಸಲು ತೀರ್ಮಾನ ಕೈಗೊಂಡಿರುವುದು ನಮ್ಮ ಸರ್ಕಾರದ ಮಹತ್ವದ ತೀರ್ಮಾನವಾಗಿದೆ” ಎಂದು ತಿಳಿಸಿದ್ದರು.
ರಾಜಸ್ಥಾನದಲ್ಲಿ ನಡೆದ ಎಐಸಿಸಿಯ ಮಹಾಧಿವೇಶನದಲ್ಲಿ ಜಾತಿ ಸಮೀಕ್ಷೆಯನ್ನು ನಡೆಸಲು ತೀರ್ಮಾನ ಕೈಗೊಳ್ಳಲಾಗಿತ್ತು. ನಾವು ಇದನ್ನು ಮುನ್ನಡೆಸುತ್ತಿದ್ದೇವೆ. ಎಲ್ಲಾ ಕುಟುಂಬಗಳ ಆರ್ಥಿಕ ಸ್ಥಿತಿಗಳ ಮಾಹಿತಿ ಸಿಕ್ಕರೆ ಸರ್ಕಾರದ ಭವಿಷ್ಯದ ಯೋಜನೆಗಳನ್ನು ರೂಪಿಸಲು ಸಹಾಯಕವಾಗಲಿದೆ” ಎಂದು ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ