ಅತ್ತಿಬೆಲೆ ಪ್ರಕರಣ: 3 ಅಧಿಕಾರಿಗಳ ಅಮಾನತಿಗೆ ಸಿಎಂ ಸೂಚನೆ

ಬೆಂಗಳೂರು: ಅತ್ತಿಬೆಲೆ ಪ್ರಕರಣದಲ್ಲಿ ತಹಶೀಲ್ದಾರ್, ಇನ್ಸ್‌ಪೆಕ್ಟರ್ ಮತ್ತು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಅಮಾನತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಪ್ರಕರಣದ ಸಂಬಂಧ ಇಂದು, ಮಂಗಳವಾರ ಸಭೆ ನಡೆಸಿದ ಅವರು, ಈ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಅಧಿಕಾರಿಗಳು ಪಟಾಕಿ ವಿಚಾರದಲ್ಲಿ ಎಲ್ಲ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ಅತ್ತಿಬೆಲೆ ಪಟಾಕಿ ದುರಂತವಾದ ಮಳಿಗೆಗೆ ಸಂಬಂಧಿಸಿದಂತೆ ಸರ್ಕಲ್‌ ಇನ್ಸ್‌ಪೆಕ್ಟರ್‌ ವರದಿ ಸಲ್ಲಿಸಿದ್ದಾರೆ. ಪೊಲೀಸ್‌ ಅಧೀಕ್ಷಕರು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಅದರ ಆಧಾರದಲ್ಲಿ ಜಿಲ್ಲಾಧಿಕಾರಿಗಳು ಪರವಾನಗಿ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ತಹಸೀಲ್ದಾರರಿಂದಲೂ ವರದಿ ಪಡೆದಿದ್ದಾರೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು.

ಸ್ಫೋಟಕ ಪದಾರ್ಥಗಳ ಕಾಯ್ದೆಯಡಿ ಪರವಾನಗಿ ಕೊಡುವಾಗ ಎಚ್ಚರಿಕೆ ವಹಿಸಬೇಕು. ಹದಿನಾಲ್ಕು ಜನರ ಜೀವಕ್ಕೆ ಯಾರು ಹೊಣೆಗಾರರು. ಎಂದು ಪ್ರಶ್ನಿಸಿದರು. ಅಲ್ಲಿರುವ ಎಲ್ಲ ಮಳಿಗೆಗಳ ಸುರಕ್ಷತೆಯನ್ನೂ ತಪಾಸಣೆ ಮಾಡಲು ಸೂಚಿಸಿದರು. ಅವರು ಅದರಲ್ಲಿರುವ ಎಲ್ಲ ಮಾನದಂಡಗಳನ್ನು ಪೂರೈಸಿದ್ದಾರೆಯೇ ಎಂದು ನೋಡಬೇಕು. ತಳಹಂತದ ಅಧಿಕಾರಿಗಳು ಸಲ್ಲಿಸಿದ ವರದಿ ಸರಿಯಾಗಿದೆಯೇ ಎಂದು ಜಿಲ್ಲಾಧಿಕಾರಿಗಳು ಪರಿಶೀಲಿಸಬೇಕು ಎಂದು ತಾಕೀತು ಮಾಡಿದರು.
ಈ ಪ್ರಕರಣದಲ್ಲಿ ಗೋದಾಮಿಗೆ ಅನುಮತಿ ನೀಡಿರಲಿಲ್ಲ. ಮಾರಾಟಕ್ಕೆ ಮಾತ್ರ ಅನುಮತಿ ನೀಡಲಾಗಿತ್ತು ಎಂಬ ಮಾಹಿತಿಯನ್ನು ಅಧಿಕಾರಿಗಳು ಗಮನಕ್ಕೆ ತಂದಿದ್ದಾರೆ. ರಾಜ್ಯದೆಲ್ಲೆಡೆ, ತಪಾಸಣೆ ನಡೆಸಿ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಎಲ್ಲ ಗೋದಾಮುಗಳು ಹಾಗೂ ಮಳಿಗೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಅವುಗಳ ಪರವಾನಗಿ ರದ್ದುಪಡಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.
ಅತ್ತಿಬೆಲೆ- ಹೊಸೂರು ಗಡಿ ಭಾಗದಲ್ಲಿ ಬರುವ ಪಟಾಕಿಗಳ ಕುರಿತು ತೀವ್ರ ನಿಗಾ ವಹಿಸಲು ಸೂಚಿಸಿದರು. ಈ ಕುರಿತು ನ್ಯಾಯಾಲಯಗಳ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲು ಸೂಚಿಸಿದರು.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣಗೆ ನಾವು ಅನುಮತಿ ನೀಡಿಲ್ಲ ; ರಾಜತಾಂತ್ರಿಕ ಪಾಸ್‌ಪೋರ್ಟ್‌ನಲ್ಲಿ ಜರ್ಮನಿಗೆ ತೆರಳಿದ್ದಾರೆ : ವಿದೇಶಾಂಗ ಸಚಿವಾಲಯ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement