ಬಿಜೆಪಿ ಅಧ್ಯಕ್ಷ ನಡ್ಡಾ ವಿರುದ್ಧದ ತನಿಖೆಗೆ ಹೈಕೋರ್ಟ್‌ ತಡೆಯಾಜ್ಞೆ

ಬೆಂಗಳೂರು : ಕಳೆದ ವಿಧಾನಸಭೆ ಚುನಾವಣೆ ವೇಳೆ ಮತದಾರರ ಮೇಲೆ ಅನುಚಿತ ಪ್ರಭಾವ ಬೀರಿದ್ದಾರೆ ಎಂದು ಆರೋಪಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ವಿರುದ್ಧ ದಾಖಲಾಗಿದ್ದ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಕಳೆದ ವಿಧಾನಸಭೆ ಚುನಾವಣೆ ವೇಳೆ “ಬಿಜೆಪಿಗೆ ಮತ ನೀಡಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದಿಂದ ಕರ್ನಾಟಕವು ವಂಚಿತವಾಗದಂತೆ ನೋಡಿಕೊಳ್ಳಿ” ಎಂದು ಸಾರ್ವಜನಿಕ ಹೇಳಿಕೆ ನೀಡಿ ಮತದಾರರ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಆರೋಪಿಸಿ ಹಾವೇರಿ ಜಿಲ್ಲೆಯ ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ವಿರುದ್ಧ ಪ್ರಕರಣ ದಾಖಲಾಗಿತ್ತು.
ತಮ್ಮ ವಿರುದ್ಧದ ಎಫ್‌ಐಆರ್‌ ಮತ್ತು ಹಾವೇರಿ ಪ್ರಧಾನ ಸಿವಿಲ್‌ ನ್ಯಾಯಾಲಯದ ಮುಂದಿರುವ ವಿಚಾರಣೆ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಸಲ್ಲಿಸಿದ್ದ ಅರ್ಜಿಯನ್ನು ವರ್ಚುವಲ್‌ ವಿಧಾನದ ಮೂಲಕ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನೇತೃತ್ವದ ಧಾರವಾಡ ಹೈಕೋರ್ಟ್‌ ಬೆಂಚ್‌ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ನಡ್ಡಾ ಅವರನ್ನು ಪ್ರತಿನಿಧಿಸಿದ್ದ ವಕೀಲ ವಿನೋದಕುಮಾರ ಅವರು, ಅರ್ಜಿದಾರರ ವಿರುದ್ಧ ಅನುಚಿತ ಪ್ರಭಾವ ಬೀರಿದ ಆರೋಪ ಮಾಡಲಾಗಿದೆ. ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗೆ ಚುನಾವಣಾ ಆಯೋಗವೇ ಅನುಮತಿ ನೀಡಿದೆ. ಮತ ಪ್ರಚಾರ ಮಾಡುವುದು ಅಭ್ಯರ್ಥಿಯ ಹಕ್ಕಾಗಿದೆ. ಅದರಂತೆ ಪ್ರಕರಣದಲ್ಲಿ ಬಿಜೆಪಿ ಅಭ್ಯರ್ಥಿ ಪರ ಅರ್ಜಿದಾರರು ಪ್ರಚಾರ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಮತದಾರರ ಮೇಲೆ ಅನುಚಿತ ಪ್ರಭಾವ ಬೀರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದ್ದರಿಂದ, ಅರ್ಜಿದಾರರ ವಿರುದ್ಧ ಎಫ್‌ಐಆರ್‌ ರದ್ದುಪಡಿಸಬೇಕು ಎಂದು ಕೋರಿದರು.

ಪ್ರಮುಖ ಸುದ್ದಿ :-   ಜಾತ್ರಾ ಮಹೋತ್ಸವದ ವೇಳೆ ರಥದ ಚಕ್ರದಡಿ ಸಿಲುಕಿ ಇಬ್ಬರು ಸಾವು

ಪ್ರಕರಣದ ಹಿನ್ನೆಲೆ: ಕಳೆದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ 2023ರ ಏಪ್ರಿಲ್‌ 19ರಂದು ಮಧ್ಯಾಹ್ನ ಶಿಗ್ಗಾವಿ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಜೆ ಪಿ ನಡ್ಡಾ ಮಾತನಾಡಿದ್ದರು. “ಕರ್ನಾಟಕದ ಜನತೆ ಬಿಜೆಪಿಗೆ ಮತ ನೀಡಿ, ಪ್ರಧಾನಿ ನರೇಂದ್ರ ಮೋದಿಯವರ ಒಲವು ಗಳಿಸಿರಿ. ಕರ್ನಾಟಕವು ಮೋದಿಯವರ ಆಶೀರ್ವಾದ ಹೊಂದಿದೆ. ಅದರಿಂದ ವಂಚಿತವಾಗದಂತೆ ನೋಡಿಕೊಳ್ಳಿ” ಎಂದು ಹೇಳಿಕೆ ನೀಡಿದ್ದರು ಎಂದು ಚುನಾವಣಾಧಿಕಾರಿಯಾಗಿದ್ದ ಲಕ್ಷ್ಮಣ ನಂದಿ ಅವರು ಶಿಗ್ಗಾವಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜೆ ಪಿ ನಡ್ಡಾ ಮತದಾರರ ಮೇಲೆ ಅನುಚಿತ ಪ್ರಭಾವ ಬೀರುವ ಮೂಲಕ ಶಿಕ್ಷಾರ್ಹ ಅಪರಾಧ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ದೂರು ಸ್ವೀಕರಿಸಿದ್ದ ಪೊಲೀಸರು, ನಡ್ಡಾ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 171(ಸಿ), 171(ಎಫ್) ಮತ್ತು ಜನಪ್ರತಿನಿಧಿಗಳ ಕಾಯಿದೆಯ ಸೆಕ್ಷನ್‌ 123(2) ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿದ್ದರು. ಈ ಪ್ರಕರಣ ರದ್ದು ಕೋರಿ ನಡ್ಡಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement