ಫ್ಲ್ಯಾಟ್‌ ಬೇರೊಬ್ಬರಿಗೆ ಮಾರಾಟ: ದೂರುದಾರರಿಗೆ ಬಡ್ಡಿ ಸಮೇತ ₹17 ಲಕ್ಷ ಪಾವತಿಸಲು ಡಿಕೆ ಸಹೋದರರಿಗೆ ಆದೇಶ

ಬೆಂಗಳೂರು : ಗ್ರಾಹಕರೊಬ್ಬರು ₹30 ಲಕ್ಷ ಮುಂಗಡ ಹಣ ನೀಡಿ ಕಾಯ್ದಿರಿಸಿದ್ದ ಫ್ಲ್ಯಾಟ್‌ ಅನ್ನು ನಿಗದಿತ ಸಮಯದಲ್ಲಿ ಪೂರ್ಣ ಹಣ ಪಾವತಿ ಮಾಡದೆ ವಿಳಂಬ ಮಾಡಿದ್ದಾರೆ ಎಂಬ ಕಾರಣ ನೀಡಿ ₹17 ಲಕ್ಷ ಕಡಿತ ಮಾಡಿ ಬಾಕಿ ಹಣ ಪಾವತಿಸಿದ್ದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಮತ್ತು ಅವರ ಸಹೋದರ, ಸಹೋದರಿಗೆ ವಾರ್ಷಿಕ ಶೇ. 10ರ ಬಡ್ಡಿಯೊಂದಿಗೆ ಕಡಿತ ಮಾಡಿರುವ ಹಣ ಮರುಪಾವತಿಸಲು ಬೆಂಗಳೂರಿನ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶಿಸಿದೆ.
ಬೆಂಗಳೂರಿನ ಎನ್‌ಟಿವೈ ಬಡಾವಣೆಯ ಜೆ. ರಾಘವೇಂದ್ರ ಎಂಬವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷರಾದ ಎಂ ಶೋಭಾ, ಸದಸ್ಯರಾದ ಸುಮಾ ಮತ್ತು ಅನಿಲಕುಮಾರ ನೇತೃತ್ವದ ತ್ರಿಸದಸ್ಯ ಪೀಠವು ಈ ಆದೇಶ ಮಾಡಿದೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.
ದೂರುದಾರರು ನ್ಯಾಯಾಂಗ ಹೋರಾಟ ನಡೆಸಿದ್ದಕ್ಕೆ ಪರಿಹಾರವಾಗಿ ₹10 ಸಾವಿರ ಪಾವತಿ ಮಾಡಬೇಕು. ಆದೇಶವನ್ನು ಮುಂದಿನ 60 ದಿನಗಳಲ್ಲಿ ಪಾಲಿಸಬೇಕು. ವಿಫಲವಾದಲ್ಲಿ ₹17,77,422 ಕ್ಕೆ ವಾರ್ಷಿಕ ಶೇ.12ರಷ್ಟು ಬಡ್ಡಿ ಸೇರಿಸಿ ಪಾವತಿಸಬೇಕು ಎಂದು ಪೀಠ ಸೂಚಿಸಿದೆ.

ಪ್ರಮುಖ ಸುದ್ದಿ :-   ಕರ್ನಾಟಕದ ಹಲವು ಜಿಲ್ಲೆಗಳಲ್ಲಿ 4 ದಿನ ಭಾರಿ ಮಳೆಯ ಮುನ್ಸೂಚನೆ

2017ರಲ್ಲಿ ದೂರುದಾರರು ₹86,06,800ಕ್ಕೆ ಫ್ಲ್ಯಾಟ್‌ ಖರೀದಿ ಮಾಡಲು ಒಪ್ಪಂದ ಮಾಡಿಕೊಂಡಿದ್ದರು. ಮುಂಗಡವಾಗಿ ₹30,81,352 ಪಾವತಿಸಿದ್ದರು. ಕೊರೊನಾ ಕಾರಣದಿಂದ ಇನ್ನುಳಿದ ₹55,25,448 ಪಾವತಿ ಮಾಡಿರಲಿಲ್ಲ. ಆದರೆ, ಪ್ರತಿವಾದಿಗಳು ದೂರುದಾರರಿಗೆ ಯಾವುದೇ ಮಾಹಿತಿ ನೀಡದೆ ಒಪ್ಪಂದ ರದ್ದು ಮಾಡಿದ್ದರು. ಜೊತೆಗೆ ಇದೇ ಫ್ಲ್ಯಾಟ್‌ ಅನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ್ದರು. ಇದಾದ ಬಳಿಕ ₹17,77,422 ಅನ್ನು ಕಡಿತಗೊಳಿಸಿ ಇನ್ನುಳಿದ ₹13,03,930 ಅನ್ನು ಚೆಕ್ ಮೂಲಕ ಹಿಂದಿರುಗಿಸಿದ್ದರು. ಆದರೆ, ಹಣವನ್ನು ಕಡಿತಗೊಳಿಸಿರುವುದಕ್ಕೆ ಯಾವುದೇ ರೀತಿಯ ಕಾರಣ ನೀಡಿರಲಿಲ್ಲ. ಈ ಬಗ್ಗೆ ದೂರುದಾರರು ತಮಗೆ ಮಂಜೂರಾಗಿದ್ದ ಫ್ಲ್ಯಾಟ್‌ ಅನ್ನು 2021ರಲ್ಲಿ ಮತ್ತೊಬ್ಬ ವ್ಯಕ್ತಿಗೆ ₹1,04,70,000ಕ್ಕೆ ಮಾರಾಟ ಮಾಡಿ ಲಾಭ ಗಳಿಸಿದ್ದಾರೆ ಎಂದು ದೂರು ನೀಡಿದ್ದರು. ದೂರಿಗೆ ಆಕ್ಷೇಪಣೆ ಸಲ್ಲಿಸಿದ್ದ ಪ್ರತಿವಾದಿಗಳು, ಫ್ಲ್ಯಾಟ್‌ ಅನ್ನು 2017ರಲ್ಲಿ ದೂರುದಾರರಿಗೆ ಮಾರಾಟಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದಾದ ಬಳಿಕ ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ ಕಾಯಿದೆ ಜಾರಿ ಮಾಡಿತ್ತು. ಹೀಗಾಗಿ, ಫ್ಲ್ಯಾಟ್‌ನ ವೆಚ್ಚ ಪರಿಷ್ಕರಣೆಯಾಗಿದ್ದು, ಅದರ ಮೊತ್ತ ₹1.4 ಕೋಟಿಗಳಿಗೆ ಹೆಚ್ಚಳವಾಗಿದೆ ಎಂದು ಹೇಳಿದ್ದರು. ದೂರುದಾರರು ಪಾವತಿ ಮಾಡಿದ್ದ ಮೊತ್ತದಲ್ಲಿ ರದ್ದತಿ ಶುಲ್ಕ (ಕ್ಯಾನ್ಸಲೇಷನ್) ಹಾಗೂ ತೆರಿಗೆಯನ್ನು ಸೇರಿ ₹17,98,077 ಅನ್ನು ಕಡಿತಗೊಳಿಸಿ, ಬಾಕಿ ₹13,03,930 ಅನ್ನು ಚೆಕ್‌ ಮೂಲಕ ಹಿಂದಿರುಗಿಸಲಾಗಿದೆ. ಒಪ್ಪಂದದ ಬಳಿಕವೂ ದೂರುದಾರರು ಎರಡು ವರ್ಷಗಳ ಕಾಲ ಬಾಕಿ ಪಾವತಿ ಮಾಡಿಲ್ಲ. ಆದ್ದರಿಂದ, ಫ್ಲ್ಯಾಟ್‌ ಅನ್ನು ಮತ್ತೊಬ್ಬರಿಗೆ ಮಾರಾಟ ಮಾಡಲಾಗಿದೆ. ಹೀಗಾಗಿ, ದೂರು ರದ್ದುಗೊಳಿಸಬೇಕು ಎಂದು ಕೋರಿದ್ದರು. ಇದನ್ನು ಆಯೋಗ ಪುರಸ್ಕರಿಸಿಲ್ಲ. ಈ ಪ್ರಕ್ರಿಯೆಯಲ್ಲಿ ಪ್ರತಿವಾದಿಗಳಿಗೆ (ಡಿಕೆಶಿ ಕುಟುಂಬ) ನಷ್ಟವುಂಟಾಗಿಲ್ಲ. ಆದರೆ, ₹17,77,422 ಕಡಿತಗೊಳಿಸಿರುವುದು ಅಕ್ರಮ. ಆದ್ದರಿಂದ, ಆ ಹಣವನ್ನು 10.04.2017ರಿಂದ (ಒಪ್ಪಂದವಾದ ದಿನ) ಶೇ.10ರಷ್ಟು ಬಡ್ಡಿಯೊಂದಿಗೆ ದೂರುದಾರರಾದ ರಾಘವೇಂದ್ರ ಅವರಿಗೆ ಹಿಂದಿರುಗಿಸಬೇಕು ಎಂದು ಆಯೋಗ ಆದೇಶಿಸಿದೆ.

ಪ್ರಮುಖ ಸುದ್ದಿ :-   ಸರ್ಕಾರಿ ಗೌರವಗಳೊಂದಿಗೆ ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅಂತ್ಯಕ್ರಿಯೆ

 

 

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement