ಲಕ್ನೋ: ಈ ಬಾರಿಯ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡದ ಮುಖಾಮುಖಿ ಇಂದು (ಅಕ್ಟೋಬರ್ ೨೯) ಇಂಗ್ಲೆಂಡ್ ವಿರುದ್ಧ ನಡೆಯಲಿದೆ. ಲಕ್ನೋದಲ್ಲಿ ನಡೆಯುವ ಭಾರತ – ಇಂಗ್ಲೆಂಡ್ ನಡುವಿನ ಪಂದ್ಯಕ್ಕೆ ಈಗ ಭಾರತದ ತಂಡದಲ್ಲಿ ಮತ್ತೊಬ್ಬರ ಪ್ರಮುಖ ಆಟಗಾರನಿಗೆ ಗಾಯದ ಸಮಸ್ಯೆ ಎದುರಾಗಿದೆ.
ಈಗಾಗಲೇ ಹಾರ್ದಿಕ್ ಪಾಂಡ್ಯ ಅವರ ಗಾಯದ ಕಾರಣದಿಂದ ತಂಡದಲ್ಲಿ ಆಡುತ್ತಿಲ್ಲ. ಇದರ ಬೆನ್ನಲ್ಲೇ ಈಗ ತಂಡದ ನಾಯಕ ರೋಹಿತ್ ಶರ್ಮಾ ಅವರಿಗೆ ಗಾಯದ ಸಮಸ್ಯೆ ಎದುರಾಗಿದೆ.
ನೆಟ್ಸ್ ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದಾಗ ರೋಹಿತ್ ಶರ್ಮಾ ಅವರ ಕೈಗೆ ಚೆಂಡು ಬಡಿದಿದೆ ಎಂದು ವರದಿಯಾಗಿದೆ. ಕೂಡಲೇ ಫಿಸಿಯೋ ಅವರು ಬಂದು ರೋಹಿತ್ ಗೆ ಚಿಕಿತ್ಸೆ ನೀಡಿದ್ದಾರೆ. ರೋಹಿತ್ ಅವರಿಗೆ ಯಾವ ರೀತಿಯ ಗಾಯವಾಗಿದೆ, ಲಕ್ನೋ ಪಂದ್ಯಕ್ಕೆ ಅವರು ಲಭ್ಯರಿದ್ದಾರೆಯೇ ಎಂದು ಇನ್ನಷ್ಟೇ ಖಚಿತವಾಗಬೇಕಿದೆ.
ಟೀಮ್ ಇಂಡಿಯಾದ ನಾಯಕನಾಗಿ ರೋಹಿತ್ ಶರ್ಮಾ ಅವರ 100 ನೇ ಪಂದ್ಯವು ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಹೆಚ್ಚುವರಿ ಮಹತ್ವವನ್ನು ಸೇರಿಸುತ್ತದೆ. 36 ವರ್ಷದ ಆರಂಭಿಕ ಆಟಗಾರ ಪಂದ್ಯಾವಳಿಯುದ್ದಕ್ಕೂ ಉತ್ತಮ ಫಾರ್ಮ್ನಲ್ಲಿದ್ದಾರೆ, ಐದು ಪಂದ್ಯಗಳಲ್ಲಿ 62.20 ಸರಾಸರಿಯೊಂದಿಗೆ ಪ್ರಭಾವಿ 311 ರನ್ಗಳನ್ನು ಗಳಿಸಿದ್ದಾರೆ. ಅವರ ಸ್ಥಿರ ಪ್ರದರ್ಶನವು ವಿಶ್ವಕಪ್ನಲ್ಲಿ ಭಾರತದ ಅಜೇಯ ಓಟಕ್ಕೆ ಪ್ರಮುಖ ಅಂಶವಾಗಿದೆ.
ಇದಲ್ಲದೆ, ರೋಹಿತ್ ಶರ್ಮಾ ಮತ್ತೊಂದು ಮೈಲಿಗಲ್ಲು ಸಾಧಿಸುವ ತುದಿಯಲ್ಲಿ ನಿಂತಿದ್ದಾರೆ, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 18,000 ರನ್ಗಳ ಗಮನಾರ್ಹ ಮೈಲಿಗಲ್ಲನ್ನು ತಲುಪಿದ ಐದನೇ ಭಾರತೀಯ ಆಟಗಾರನಾಗಲು ಅವರಿಗೆ ಕೇವಲ 47 ರನ್ಗಳ ಅಗತ್ಯವಿದೆ.
ಭಾರತ ಆಡಿದ ಐದೂ ಪಂದ್ಯಗಳನ್ನು ಗೆದ್ದು ಉತ್ತಮ ಪ್ರದರ್ಶನ ನೀಡುತ್ತ ಬಂದಿದೆ. ಭಾರತದಲ್ಲಿ ಭಾರತ ತಂಡವನ್ನು ಸೋಲಿಸುವುದು ಕಷ್ಟ ಎಂಬ ಅರಿವು ಎಲ್ಲ ತಂಡಗಳಿಗೂ ಆಗತೊಡಗಿದೆ. ಸತತ ಸೋಲಿನಿಂದಾಗಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಜಾಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ತಂಡ ಈ ನಿರ್ಣಾಯಕ ಪಂದ್ಯವನ್ನು ಆಡಬೇಕಿದೆ.
ಇಂಗ್ಲೆಂಡ್ 5 ಪಂದ್ಯಗಳಲ್ಲಿ ಗೆಲುವು ಕಂಡಿರುವುದು ಕೇವಲ ಒಂದು ಪಂದ್ಯದಲ್ಲಿ ಮಾತ್ರ. ವಿಶ್ವಕಪ್ನ ಈಗಿನ ಲೆಕ್ಕಾಚಾರದಂತೆ ಸದ್ಯದ ಸ್ಥಿತಿಯಲ್ಲಿ ಐದನೇ ಸ್ಥಾನದಲ್ಲಿರುವ ತಂಡಕ್ಕೂ ನಾಲ್ಕಕ್ಕೇರುವುದು ಕೂಡ ದೊಡ್ಡ ಸವಾಲು. ಇಂಥ ಸ್ಥಿತಿಯಲ್ಲಿ 10ನೇ ಸ್ಥಾನಕ್ಕೆ ಜಾರಿರುವ ಇಂಗ್ಲೆಂಡ್ ಮೇಲೇರಿ ಬರುತ್ತದೆ ಎಂಬ ಯಾವ ನಂಬಿಕೆಯನ್ನೂ ಇರಿಸಿಕೊಳ್ಳುವ ಹಾಗಿಲ್ಲ.
ನಿಮ್ಮ ಕಾಮೆಂಟ್ ಬರೆಯಿರಿ