ಚುನಾವಣಾ ಅಕ್ರಮ ಆರೋಪ : ಶಾಸಕ ಎಚ್‌.ಡಿ. ರೇವಣ್ಣಗೆ ಮತ್ತೆ ಸಮನ್ಸ್‌ ಜಾರಿ ಮಾಡಿದ ಹೈಕೋರ್ಟ್‌

ಬೆಂಗಳೂರು : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ನಡೆಸಿರುವ ಹಿನ್ನೆಲೆಯಲ್ಲಿ ಎಚ್‌ ಡಿ ರೇವಣ್ಣ ಅವರು ಹೊಳೆನರಸೀಪುರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವುದನ್ನು ಅಸಿಂಧುಗೊಳಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಕುರಿತು ರೇವಣ್ಣ ಅವರಿಗೆ ಕರ್ನಾಟಕ ಹೈಕೋರ್ಟ್‌ ಸೋಮವಾರ ಮತ್ತೆ ಸಮನ್ಸ್‌ ಜಾರಿ ಮಾಡಿದೆ.
ಪರಾಜಿತ ಅಭ್ಯರ್ಥಿ ಜಿ. ದೇವರಾಜೇಗೌಡ ಸಲ್ಲಿಸಿದ್ದ ಚುನಾವಣಾ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
ಅರ್ಜಿದಾರರ ಪರ ಹಿರಿಯ ವಕೀಲರಾದ ಪ್ರಮೀಳಾ ನೇಸರ್ಗಿ ಅವರು, ಅರ್ಜಿ ಸಂಬಂಧ ಶಾಸಕ ಎಚ್.ಡಿ. ರೇವಣ್ಣ ಅವರಿಗೆ ಹೈಕೋರ್ಟ್‌ ಸಮನ್ಸ್ ಜಾರಿ ಮಾಡಿದ್ದರೂ ಈವರೆಗೂ ಅವರಿಗೆ ಸಮನ್ಸ್‌ ಜಾರಿಯಾಗಿಲ್ಲ. ಆದ್ದರಿಂದ ಪತ್ರಿಕಾ ಪ್ರಕಟಣೆ ಮೂಲಕ ಸಮನ್ಸ್ ಜಾರಿ ಮಾಡಲು ಆದೇಶಿಸಬೇಕು ಎಂದು ಕೋರಿದರು.

ಅದಕ್ಕೆ ಪ್ರತಿಕ್ರಿಯಿಸಿದ ಪೀಠವು ಎಚ್‌.ಡಿ. ರೇವಣ್ಣ ಸೇರಿದಂತೆ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಎಲ್ಲ ಅಭ್ಯರ್ಥಿಗಳಿಗೆ ಮತ್ತೆ ಸಮನ್ಸ್‌ ಜಾರಿಗೊಳಿಸಿ ವಿಚಾರಣೆಯನ್ನು ನವೆಂಬರ್‌ 29ಕ್ಕೆ ಮುಂದೂಡಿತು.
ಚುನಾವಣೆ ಸಂದರ್ಭದಲ್ಲಿ ಎಚ್‌ ಡಿ ರೇವಣ್ಣ ಅವರ ಬೆಂಬಲಿಗರು ಅಣ್ಣೆಹಳ್ಳಿಯಲ್ಲಿ ಮತದಾರರಿಗೆ ಎರಡು ಕೋಳಿ ಮತ್ತು ಎರಡು ಸಾವಿರ ನಗದು ಹಂಚಿ ಮತ ಹಾಕಿಸಿಕೊಂಡಿದ್ದಾರೆ. ಶಾಂತಿಗ್ರಾಮದ ಬಳಿ ಜನರಿಗೆ ದುಡ್ಡು, ಕೋಳಿಯ ಆಮಿಷವೊಡ್ಡುತ್ತಿದ್ದುದನ್ನು ತಡೆಯಲು ಹೋದಾಗ ರೇವಣ್ಣ ಅವರ ಬೆಂಬಲಿಗರು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. 30 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಾಮಪತ್ರದಲ್ಲಿ ತಮ್ಮ ಆಸ್ತಿ ವಿವರಗಳ ಬಗ್ಗೆ ರೇವಣ್ಣ ಸಂಪೂರ್ಣ ಮಾಹಿತಿ ನೀಡಿಲ್ಲ. ಅವರ ಪತ್ನಿ ಭವಾನಿ ಅವರ ಆಸ್ತಿಯ ವಿವರಗಳು ಸಹ ಸುಳ್ಳಿನಿಂದ ಕೂಡಿವೆ. ರೇವಣ್ಣ ಅವರು ಅಕ್ರಮ ಎಸಗಿ ಜಯಗಳಿಸಿದ್ದಾರೆ, ಹೀಗಾಗಿ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಪ್ರಮುಖ ಸುದ್ದಿ :-   ಸಿದ್ದಾಪುರ : ಸಿಡಿಲು ಬಡಿದು 7 ಹಸುಗಳು ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement