ಹುಲಿ ಉಗುರಿನ ಪೆಂಡೆಂಟ್‌ ಪ್ರಕರಣ : ನಟ ಜಗ್ಗೇಶ ವಿರುದ್ಧದ ಪ್ರಕ್ರಿಯೆಗೆ ತಡೆ ; ಅಧಿಕಾರಿಗಳ ನಡೆಗೆ ಹೈಕೋರ್ಟ್‌ ಅಸಮಾಧಾನ

ಬೆಂಗಳೂರು : ಹುಲಿ ಉಗುರಿನ ಪೆಂಡೆಂಟ್‌ ಧರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ಸದಸ್ಯ ಹಾಗೂ ನಟ ಜಗ್ಗೇಶ ಅವರ ನಿವಾಸದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಶೋಧನೆಯ ನಂತರದ ಎಲ್ಲಾ ಪ್ರಕ್ರಿಯೆಗೆ ಕರ್ನಾಟಕ ಹೈಕೋರ್ಟ್‌ ಸೋಮವಾರ ಮಧ್ಯಂತರ ತಡೆಯಾಜ್ಞೆ ವಿಧಿಸಿದೆ.
ಚಿತ್ರನಟ ಜಗ್ಗೇಶ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.
ಎಲ್ಲಾ ಮುಂದಿನ ಪ್ರಕ್ರಿಯೆಗೆ ತಡೆ ನೀಡಲಾಗಿದೆ. ಹುಲಿ ಉಗುರಿನ ಪೆಂಡೆಂಟ್‌ ಎಂದು ವಶಪಡಿಸಿಕೊಂಡಿರುವ ವಸ್ತುವನ್ನು ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ತಪಾಸಣೆಗೆ ಕಳುಹಿಸಿಕೊಡಲಾಗಿದೆ. ಎಫ್‌ಎಸ್‌ಎಲ್‌ ವರದಿಯು ಅರ್ಜಿಯ ಅಂತಿಮ ವಿಚಾರಣೆಗೆ ಒಳಪಟ್ಟಿರುತ್ತದೆ” ಎಂದು ಹೇಳಿರುವ ನ್ಯಾಯಾಲಯವು ವಿಚಾರಣೆಯನ್ನು ನವೆಂಬರ್‌ 29ಕ್ಕೆ ಮುಂದೂಡಿದೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.

ಅರ್ಜಿದಾರರಾದ ನಟ ಜಗ್ಗೇಶ ಪರವಾಗಿ ವಾದಿಸಿದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ಹುಲಿ ಉಗುರಿನ ಪೆಂಡೆಂಟ್‌ ಧರಿಸಿದ್ದ ಆರೋಪದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿನ ಚಿತ್ರ ಆಧರಿಸಿ ನೋಟಿಸ್‌ ನೀಡಿದ ಒಂದೇ ತಾಸಿನಲ್ಲಿ 14 ಅಧಿಕಾರಿಗಳ ತಂಡ ಜಗ್ಗೇಶ ಅವರ ಮನೆಯಲ್ಲಿ ಶೋಧ ನಡೆಸಿದೆ. ರಾಜ್ಯಸಭಾ ಸದಸ್ಯ ಎಂಬುದನ್ನೂ ಮರೆತು ಶೋಧನೆ ನಡೆಸಲಾಗಿದೆ. ವನ್ಯಜೀವಿಯ ಕಾಯಿದೆಯ ಸೆಕ್ಷನ್‌ 39 ಮತ್ತು 40 ಹಾಲಿ ಪ್ರಕರಣದಲ್ಲಿ ಅನ್ವಯಿಸುವುದೇ ಇಲ್ಲ. ಶೋಧದ ಬಳಿಕ ಅರ್ಜಿದಾರರ ಮನೆಯ ಹೊರಗೆ ಮಾಧ್ಯಮಗೋಷ್ಠಿ ನಡೆಸಲಾಗಿದೆ ಎಂದು ಆಕ್ಷೇಪಿಸಿದರು.
ಅರ್ಜಿದಾರರಿಗೆ ನೀಡಲಾದ ನೋಟಿಸ್‌ ಗೆ ಪ್ರತಿಕ್ರಿಯಿಸಲೂ ಅವಕಾಶ ನೀಡಿಲ್ಲ. ಸಂಸದರಾಗಿರುವ ಅವರು ಎಲ್ಲಿಯೂ ಓಡಿ ಹೋಗುತ್ತಿರಲಿಲ್ಲ. ರಾಜ್ಯಸಭಾ ಸದಸ್ಯರಾಗಿದ್ದು, ಹಲವು ದಾಖಲೆಗಳು ಅವರ ಕಸ್ಟಡಿಯಲ್ಲಿವೆ. ಇವು ಸಂಸತ್‌ಗೆ ಸೇರಿದವು. ಈ ಸಂದರ್ಭದಲ್ಲಿ ದಾಳಿ ನಡೆಸಲಾಗಿದೆ ಎಂದರು.

ಪ್ರಮುಖ ಸುದ್ದಿ :-   ಶಿರಸಿ ; ಹಾಸ್ಟೆಲ್ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಬಾಲಕಿ

ಇದಕ್ಕೆ ಪೀಠವು “ಜಗ್ಗೇಶ್‌ ಅವರಿಗೆ ನೋಟಿಸ್‌ ನೀಡಿದ ಕೆಲವೇ ಗಂಟೆಗಳಲ್ಲಿ ಶೋಧ ಏಕೆ ನಡೆಸಿದಿರಿ? ನೋಟಿಸ್‌ಗೆ ಪ್ರತಿಕ್ರಿಯೆ ಪಡೆದ ಬಳಿಕವೂ ಸಮಾಧಾನವಾಗದಿದ್ದರೆ ದಾಳಿ ನಡೆಸಬಹುದಿತ್ತಲ್ಲವೇ ? ಇದು ನಿಯಮಬಾಹಿರವಲ್ಲವೇ? ಅವರು ನಕಲಿ ಪೆಂಡೆಂಟ್‌ ನೀಡುತ್ತಾರೆ ಎಂಬುದು ನಿಮ್ಮ ಗಮನಕ್ಕೆ ಹೇಗೆ ಬಂತು? ಒಂದು ಗಂಟೆಯಲ್ಲಿ ನಿಮಗೆ ಸಿಕ್ಕ ಆ ಸುದ್ದಿಯ ಮೂಲ ಯಾವುದು? ಯಾರೇ ವನ್ಯಜೀವಿಯ ಯಾವುದೇ ವಸ್ತು ಸಂಗ್ರಹಿಸುವುದು ಅಪರಾಧ. ಆದರೆ, ನಿಮ್ಮ ಪ್ರಚಾರವು ಈ ರೀತಿ ಇರಬಾರದು” ಎಂದು ಅಸಮಾಧಾನ ವ್ಯಕ್ತಪಡಿಸಿತು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಜಗದೀಶ ಅವರು “ನೋಟಿಸ್‌ ನೀಡಿದ ಬಳಿಕ ಸಾಕಷ್ಟು ಬೆಳವಣಿಗೆಗಳು ನಡೆದ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ. ನಕಲಿ ಪೆಂಡೆಂಟ್‌ ಅನ್ನು ಅಧಿಕಾರಿಗಳ ವಶಕ್ಕೆ ನೀಡುವ ಯತ್ನ ಮಾಡಿದ್ದರಿಂದ ದಾಳಿ ಮಾಡಬೇಕಾಯಿತು. ವನ್ಯಜೀವಿ ಕಾಯಿದೆ ಸೆಕ್ಷನ್‌ 50ರ ಅಡಿ ನೋಟಿಸ್‌ ನೀಡದೆಯೂ ಅಧಿಕಾರಿಗಳು ದಾಳಿ ನಡೆಸಬಹುದಿತ್ತು. ನಾವು ಪ್ರಚಾರಕ್ಕಾಗಿ ಏನನ್ನೂ ಮಾಡಿಲ್ಲ. ಹುಲಿ ಉಗುರಿನ ಪೆಂಡೆಂಟ್‌ ನೀಡಿದ್ದು ನಮ್ಮ ತಾಯಿ ಎಂದು ಅರ್ಜಿದಾರರು ಹೇಳಿದ್ದರು ಎಂದು ವಾದ ಮಂಡಿಸಿದರು.

ಪ್ರಮುಖ ಸುದ್ದಿ :-   ಕೊಲ್ಲೂರು ಮೂಕಾಂಬಿಕೆ ದೇವಿ ದರ್ಶನ ಪಡೆದು ಬೆಳ್ಳಿ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ

ಆಗ ಪೀಠವು “ವನ್ಯಜೀವಿ ಸಂರಕ್ಷಣಾ ಕಾಯಿದೆಯಲ್ಲಿಯೇ ನೋಟಿಸ್‌ ನೀಡದೆಯೇ ದಾಳಿ ನಡೆಸಬಹುದು ಎಂದಿದ್ದರೆ ನೋಟಿಸ್‌ ನೀಡಿದ್ದೇಕೆ? ನೋಟಿಸ್‌ ನೀಡಿದ ನಂತರ ಪ್ರತಿಕ್ರಿಯೆ ಸಲ್ಲಿಸುವುದಕ್ಕೂ ಮುನ್ನ ದಾಳಿ ನಡೆಸಿದ್ದೇಕೆ? ಇದೆಲ್ಲವನ್ನೂ ಪ್ರಚಾರಕ್ಕಾಗಿ ಮಾಡಿದ್ದೀರಾ?” ಎಂದು ಸರ್ಕಾರವನ್ನು ಪ್ರಶ್ನಿಸಿತು.
ಇದಕ್ಕೆ ಜಗದೀಶ್‌ ಅವರು “ಕೇವಲ ನಾಲ್ಕು ಅಧಿಕಾರಿಗಳ ತಂಡ ಅರ್ಜಿದಾರರ ಮನೆಯಲ್ಲಿ ಶೋಧ ನಡೆಸಿದೆ. ದಾಖಲೆಗಳನ್ನು ತಿರುಚುವ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಜಗ್ಗೇಶ್‌ ಅವರ ಮನೆಯಲ್ಲಿ ಶೋಧ ನಡೆಸಿದ್ದಾರೆ. ಮಾಧ್ಯಮಗೋಷ್ಠಿ ನಡೆಸಿದ್ದು ಅರ್ಜಿದಾರರು” ಎಂದು ಸಮರ್ಥಿಸಿಕೊಂಡರು.
.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement