ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆದರ್ಲ್ಯಾಂಡ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡದ ಕೆ.ಎಲ್. ಕೇವಲ 62 ಎಸೆತಗಳಲ್ಲಿ ಶತಕ ಬಾರಿಸಿ ವಿಶ್ವಕಪ್‌ನಲ್ಲಿ ವೇಗದ ಶತಕ ಸಿಡಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ದಾಖಲೆಯನ್ನು ಅವರು ಮುರಿದಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡಕ್ಕೆ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಅರ್ಧಶತಕಗಳನ್ನು ಸಿಡಿಸುವ ಮೂಲಕ ಉತ್ತಮ ಆರಂಭ ಪಡೆಯಿತು. ವಿರಾಟ್ ಕೊಹ್ಲಿ ಕೂಡ ಅರ್ಧಶತಕ ಸಿಡಿಸಿದರು. ನಂತರ ಶ್ರೇಯಸ್ ಅಯ್ಯರ್ ಹಾಗೂ ಕೆ.ಎಲ್ ರಾಹುಲ್ 208 ರನ್‌ಗಳ ಉತ್ತಮ ಜೊತೆಯಾಟ ಆಡಿದರು. ಶ್ರೇಯಸ್ ಅಯ್ಯರ್ ಕೇವಲ 84 ಎಸೆತಗಳಲ್ಲಿ ಶತಕ ಸಿಡಿಸಿದ್ದರೆ, ಕೆ.ಎಲ್ ರಾಹುಲ್ ಕೇವಲ 62 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ವಿಶೇಷ ದಾಖಲೆ ಬರೆದರು.
ಬಾಸ್ ಡಿ ಲೀಡೆ ಅವರ ಬೌಲಿಂಗ್‌ನಲ್ಲಿ ಮಿಡ್ ವಿಕೆಟ್ ಮೇಲೆ ಎರಡು ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಕೆ.ಎಲ್ ರಾಹುಲ್ ಕೇವಲ 62 ಎಸೆತಗಳಲ್ಲಿ ಶತಕ ದಾಖಲಿಸಿದರು. ಆ ಮೂಲಕ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ವೇಗವಾಗಿ ಶತಕ ಸಿಡಿಸಿದ ಭಾರತೀಯ ಬ್ಯಾಟರ್ ಆದರು. 63 ಎಸೆತಗಳಲ್ಲಿ ಶತಕ ಹೊಡೆದಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ದಾಖಲೆಯನ್ನು ಮುರಿದಿದ್ದಾರೆ.
ಇದೇ ವಿಶ್ವಕಪ್ ಪಂದ್ಯಾವಳಿಯಲ್ಲಿ ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಕೇವಲ 63 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಈ ಪಂದ್ಯದಲ್ಲಿ 64 ಎಸೆತಗಳನ್ನು ಎದುರಿಸಿದ ರಾಹುಲ್ 4 ಭರ್ಜರಿ ಸಿಕ್ಸರ್ ಹಾಗೂ 11 ಬೌಂಡರಿಗಳೊಂದಿಗೆ 102 ರನ್ ಗಳಿಸಿದರು.
ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಕೆ.ಎಲ್ ರಾಹುಲ ಆಡಿದ 9 ಪಂದ್ಯಗಳಿಂದ 69.40ರ ಸರಾಸರಿಯಲ್ಲಿ 347 ರನ್‌ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ ಒಂದು ಅರ್ಧಶತಕವನ್ನು ಸಿಡಿಸಿದ್ದಾರೆ. ವಿರಾಟ್ ಕೊಹ್ಲಿ (594), ರೋಹಿತ್ ಶರ್ಮಾ (503) ಹಾಗೂ ಶ್ರೇಯಸ್ ಅಯ್ಯರ್ (421) ಬಳಿಕ ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ನಾಲ್ಕನೇ ಬ್ಯಾಟರ್ ಆಗಿದ್ದಾರೆ.
ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶತಕ ಸಿಡಿಸಿದ ಭಾರತದ ಎರಡನೇ ವಿಕೆಟ್ ಕೀಪರ್ ಎಂಬ ಸಾಧನೆಗೂ ಕೆ.ಎಲ್ ರಾಹುಲ್ ಭಾಜನರಾಗಿದ್ದಾರೆ. ಇದಕ್ಕೂ ಮೊದಲು ರಾಹುಲ್ ದ್ರಾವಿಡ್ 1999ರ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧ 145 ರನ್ ಗಳಿಸಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ