ಇಂದು ಹುತಾತ್ಮ ಸೇನಾಧಿಕಾರಿ ಕ್ಯಾ.ಪ್ರಾಂಜಲ್ ಅಂತ್ಯಕ್ರಿಯೆ, ಅಂತಿಮ ದರ್ಶನಕ್ಕೆ ಅವಕಾಶ: 50 ಲಕ್ಷ ರೂ. ಪರಿಹಾರ ಘೋಷಣೆ

ಬೆಂಗಳೂರು : ಕ್ಯಾಪ್ಟನ್​ ಪ್ರಾಂಜಲ್ ಅವರ ಪಾರ್ಥಿವ ಶರೀರ ಶುಕ್ರವಾರ ರಾತ್ರಿಯೇ ಬೆಂಗಳೂರು ತಲುಪಿದೆ. ಎಚ್ ಎಎಲ್ ವಿಮಾನ ನಿಲ್ದಾಣಕ್ಕೆ ಭಾರತೀಯ ವಾಯುಪಡೆಯ ವಿಮಾನದಲ್ಲಿ ಪಾರ್ಥಿವ ಶರೀರ ಆಗಮಿಸಿದೆ.
ಆ ಬಳಿಕ ಕ್ಯಾಪ್ಟನ್ ಪ್ರಾಂಜಲ್ ಅವರ ಪಾರ್ಥಿವ ಶರೀರಕ್ಕೆ ಅವರ ತಂದೆ-ತಾಯಿ ಮೊದಲಿಗೆ ಪುಷ್ಪಗುಚ್ಛ ಸಲ್ಲಿಸಿ ಅಂತಿಮ ನಮನ ಸಲ್ಲಿಸಿದರು. ಆ ಬಳಿಕ ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ , ಕೆ.ಜೆ ಜಾರ್ಜ್​, ಬಿ ವೈ ವಿಜಯೇಂದ್ರ, ಸಂಸದ ತೇಜಸ್ವಿ ಸೂರ್ಯ ಅಂತಿಮ ನಮನ ಸಲ್ಲಿಸಿದರು. ನಂತರ ಬೆಂಗಳೂರು ಹೊರವಲಯ ಜಿಗಣಿಯಲ್ಲಿರುವ ಅವರ ಮನೆಗೆ ಕ್ಯಾಪ್ಟನ್​​ ಪಾರ್ಥಿವ ಶರೀರ ಆಗಮಿಸಿದೆ. ಇಂದು, ಶನಿವಾರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಸಕಲ ಸರ್ಕಾರಿ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ ಇಂದು ಆನೇಕಲ್ ನಲ್ಲಿ ನೆರವೇರಲಿದೆ. ಸರ್ಕಾರದ ಪರವಾಗಿ ಗೃಹ ಸಚಿವ ಡಾ ಜಿ ಪರಮೇಶ್ವರ ಭಾಗವಹಿಸಲಿದ್ದಾರೆ.

50 ಲಕ್ಷ ರೂ. ಪರಿಹಾರ
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಅವರ ಕುಟುಂಬದ ದುಃಖದಲ್ಲಿ ನಾನು ಭಾಗಿಯಾಗುತ್ತೇನೆ. ಹುತಾತ್ಮ ಯೋಧನ ಕುಟುಂಬಕ್ಕೆ ನಮ್ಮ ಸರ್ಕಾರದಿಂದ ಸಾಧ್ಯವಿರುವ ಎಲ್ಲಾ ರೀತಿಯ ನೆರವೂ ಸಿಗಲಿದೆ. ಸರ್ಕಾರದಿಂದ ಈಗ 50 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಪ್ರಕಟಿಸಿದರು.ನವೆಂಬರ್ 22 ರಂದು ಕಾಶ್ಮೀರದ ರಜೌರಿಯ ಕಾವಿಕೋಟ್ ಎಂಬಲ್ಲಿ ಇಬ್ಬರು ಉಗ್ರರು ಅಡಗಿದ್ದರು. ಕ್ಯಾಪ್ಟನ್ ಪ್ರಾಂಜಲ್‌ ಅವರು ತಮ್ಮ ತಂಡದೊಂದಿಗೆ ಕಾರ್ಯಾಚರಣೆ ನಡೆಸಿದ್ದರು. ನಾಗರಿಕರ ಜೊತೆ ಸಮಾಲೋಚನೆ ನಡೆಸುತ್ತಿರುವ ಸಂದರ್ಭದಲ್ಲಿ ಉಗ್ರರಿಂದ ತೀವ್ರವಾದ ದಾಳಿ ನಡೆಯಿತು. ಈ ಗುಂಡಿನ ದಾಳಿಯಲ್ಲಿ ಪ್ರಾಂಜಲ್‌ ಅವರು ನಾಗರಿಕರನ್ನು ರಕ್ಷಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಉಗ್ರರೊಂದಿಗೆ ಗುಂಡಿನ ಚಕಮಕಿಯಲ್ಲಿ ಪ್ರಾಂಜಲ್‌ ಅವರು ತೀವ್ರವಾಗಿ ಗಾಯಗೊಂಡು ಹುತಾತ್ಮರಾದರು. ಪ್ರಾಂಜಲ್ ಅವರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ನಾಗರಿಕರನ್ನು ರಕ್ಷಿಸಿದರು ಎಂದು ಸ್ಮರಿಸಿದರು.

ಪ್ರಮುಖ ಸುದ್ದಿ :-   ರಾಜ್ಯದ ವಿಧಾನ ಪರಿಷತ್ತಿನ 6 ಸ್ಥಾನಗಳಿಗೆ ಚುನಾವಣೆ ಘೋಷಣೆ

ಕ್ಯಾಪ್ಟನ್ ಎಂ.ವಿ.ಪ್ರಾಂಜಲ್, ಕ್ಯಾಪ್ಟನ್​ ಶುಭಂ ಗುಪ್ತಾ, ಹವಾಲ್ದಾರ್ ಅಬ್ದುಲ್ ಮಜೀದ್, ಲ್ಯಾನ್ಸ್ ನಾಯಕ್ ಸಂಜಯ್ ಬಿಷ್ತ್, ಪ್ಯಾರಾಟ್ರೂಪರ್ ಸಚಿನ್ ಲಾರ್ ಮೊನ್ನೆ ಕಾಶ್ಮೀರದ ರಜೌರಿ ಜಿಲ್ಲೆಯ ಬಾಜಿ ಮಾಲ್‌ ಅರಣ್ಯ ಪ್ರದೇಶದಲ್ಲಿ ಹುತಾತ್ಮರಾದ ವೀರ ಯೋಧರಾಗಿದ್ದು, ಅವರಲ್ಲಿ ಕ್ಯಾಪ್ಟನ್ ಪ್ರಾಂಜಲ್ ಕರ್ನಾಟಕದವರು.
ಮಂಗಳೂರಿನಲ್ಲಿ ಎಂಆರ್‌ಪಿಎಲ್‌ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಎಂ.ವೆಂಕಟೇಶ್‌ ಹಾಗೂ ಅನುರಾಧ ದಂಪತಿಯ ಏಕೈಕ ಪುತ್ರ ಪ್ರಾಂಜಲ್‌ ಮಂಗಳೂರಿನಲ್ಲಿ ಜನಿಸಿದವರು. ಮಧ್ಯಪ್ರದೇಶದ ಮಿಲಿಟರಿ ಕಾಲೇಜ್‌ ಆಫ್‌ ಟೆಲಿಕಮ್ಯುನಿಕೇಶನ್‌ ಎಂಜಿನಿಯರಿಂಗ್‌ನಲ್ಲಿ ಶಿಕ್ಷಣ ಪಡೆದು, ನೇರವಾಗಿ ಭಾರತೀಯ ಸೇನೆ ಸೇರಿದ್ದರು. ಎರಡು ವರ್ಷಗಳ ಹಿಂದೆಯಷ್ಟೇ ಪ್ರಾಂಜಲ್‌ ಅವರ ವಿವಾಹ ನೆರವೇರಿದ್ದು, ಅವರ ಪತ್ನಿ ಚೆನ್ನೈ ಐಐಟಿಯಲ್ಲಿ ಎಂ.ಟೆಕ್‌ ಮಾಡುತ್ತಿದ್ದಾರೆ.

2.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement