ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ನೂತನ ಅಧ್ಯಕ್ಷರ ನೇಮಕ

ಬೆಂಗಳೂರು: ಹಿಮಾಚಲ ಪ್ರದೇಶ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಲ್‌. ನಾರಾಯಣಸ್ವಾಮಿ ಅವರನ್ನು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಅಲ್ಲದೆ, ಜಿಲ್ಲಾ ನಿವೃತ್ತ ನ್ಯಾಯಾಧೀಶ ಎಸ್‌.ಕೆ. ವಂಟಿಗೋಡಿ ಅವರನ್ನು ಆಯೋಗದ ನ್ಯಾಯಾಂಗ ಸದಸ್ಯರಾಗಿ ಹಾಗೂ ನಿವೃತ್ತ ಐಎಎಸ್‌ ಅಧಿಕಾರಿ ಡಾ.ಟಿ.ಶ್ಯಾಂ ಭಟ್‌ ಅವರನ್ನು ಆಡಳಿತಾತ್ಮಕ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ನೂತನ ಅಧ್ಯಕ್ಷರು ಹಾಗೂ ಸದಸ್ಯರು ಐದು ವರ್ಷ ಅಥವಾ 70 ವರ್ಷ ವಯಸ್ಸಾಗುವವರೆಗೆ ಈ ಎರಡರಲ್ಲಿ ಯಾವುದು ಮೊದಲೇ ಅಲ್ಲಿಯವರೆಗೆ ಅಧಿಕಾರವಧಿಯನ್ನು ಹೊಂದಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನವರಾದ ಎಲ್ ನಾರಾಯಣಸ್ವಾಮಿ ಅವರು ನ್ಯಾಯಮೂರ್ತಿ ಲಿಂಗಪ್ಪ ನಾರಾಯಣಸ್ವಾಮಿ 1987ರಲ್ಲಿ ವಕೀಲ ವೃತ್ತಿ ಆರಂಭಿಸಿದರು. 2009ರಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿಗಳಾಗಿ ನೇಮಕಗೊಂಡರು. 10 ವರ್ಷಗಳ ಕಾಲ ಹೈಕೋರ್ಟ್‌ ನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸಿದ ಇವರು 2019ರ ಜ.17ರಿಂದ ಮೇ 9ರವರೆಗೆ ಕರ್ನಾಟಕ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಾಗಿ ಕಾರ್ಯಭಾರ ನಿರ್ವಹಿಸಿದರು. 2019ರ ಅ.6ರಂದು ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕಗೊಂಡು, 2021ರ ಜೂನ್‌ ತಿಂಗಳಲ್ಲಿ ನಿವೃತ್ತಿ ಹೊಂದಿದರು. ಈಗ ರಾಜ್ಯ ಸರ್ಕಾರ ಅವರನ್ನು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರನ್ನಾಗಿ ಸರ್ಕಾರ ನೇಮಕ ಮಾಡಿದೆ.

ಪ್ರಮುಖ ಸುದ್ದಿ :-   ಕುಮಟಾ : ‘ರಜತ ಸಂಭ್ರಮ ಸೌರಭ’ ಕಾರ್ಯಕ್ರಮದಲ್ಲಿ ಪಂ.ಗಣಪತಿ ಭಟ್ಟ ಹಾಸಣಗಿಗೆ ʼಸೌರಭ ರಾಷ್ಟ್ರೀಯ ಸಮ್ಮಾನ್‌ʼ ಪ್ರದಾನ

ಸದಸ್ಯರಾಗಿ ನೇಮಕಗೊಂಡಿರುವ ಎಸ್‌.ಕೆ. ವಂಟಿಗೋಡಿ ಅವರು ಮೈಸೂರು ಜಿಲ್ಲಾ ನ್ಯಾಯಾಧೀಶರಾಗಿ, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ ರಿಜಿಸ್ಟ್ರಾರ್‌ ಆಗಿ ಸೇವೆ ಸಲ್ಲಿಸಿದ್ದಾರೆ. ಇನ್ನೊಬ್ಬ ಸದಸ್ಯ ನಿವೃತ್ತ ಐಎಎಸ್‌ ಅಧಿಕಾರಿ ಡಾ. ಟಿ. ಶ್ಯಾಂ ಭಟ್‌ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಯುಕ್ತರಾಗಿ, ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
ಸುಮಾರು ಎಂಟು ತಿಂಗಳಿಂದ ಆಯೋಗ ಖಾಲಿ ಇತ್ತು. ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಆಯೋಗಕ್ಕೆ ಹೊಸ ಅಧ್ಯಕ್ಷರು, ಸದಸ್ಯರನ್ನು ನೇಮಕ ಮಾಡುವ ಪ್ರಕ್ರಿಯೆ ನನೆಗುದಿಗೆ ಬಿದ್ದಿತ್ತು. ನಂತರ ಪ್ರತಿಪಕ್ಷ ನಾಯಕನ ಆಯ್ಕೆ ಆಗದ ಕಾರಣಕ್ಕೆ ನೇಮಕಾತಿ ಇನ್ನಷ್ಟು ವಿಳಂಬವಾಗಿತ್ತು. ಈಗ ಪೂರ್ಣ ಪ್ರಮಾಣದ ಆಯೋಗ ರಚನೆಯಾಗಿದೆ.

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement