ಚಿಕ್ಕಮಗಳೂರಿನಲ್ಲಿ ವಕೀಲನ ಮೇಲೆ ಹಲ್ಲೆ : ಸ್ವಯಂಪ್ರೇರಿತ ದೂರು ದಾಖಲಿಸಿ ವಿಚಾರಣೆ ನಡೆಸಿದ ಹೈಕೋರ್ಟ್‌

ಬೆಂಗಳೂರು : ಚಿಕ್ಕಮಗಳೂರಿನ ವಕೀಲ ಪ್ರೀತಂ ಅವರ ಮೇಲಿನ ಪೊಲೀಸರ ದೌರ್ಜನ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತುರ್ತು ವಿಚಾರಣೆ ನಡೆಸಿತು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ರಾಜ್ಯ ಸರ್ಕಾರ ತಕ್ಷಣ ಕ್ರಮಕೈಗೊಂಡಿರುವುದರಿಂದ ಕಲಾಪಕ್ಕೆ ಗೈರಾಗದಂತೆ ವಕೀಲರಿಗೆ ಸಲಹೆ ನೀಡಿತು.
“ಪ್ರೀತಂ ಮೇಲಿನ ಪೊಲೀಸರ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುವುದು” ಎಂದು ಅಡ್ವೊಕೇಟ್‌ ಜನರಲ್‌ ಅವರು ಮೆಮೊದಲ್ಲಿ ತಿಳಿಸಿರುವುದರಿಂದ ಅರ್ಜಿ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ ಎಂದು ನ್ಯಾಯಾಲಯ ತಿಳಿಸಿತು.

ವಕೀಲ ಪ್ರೀತಂ ಮೇಲಿನ ಅಮಾನವೀಯ ಹಲ್ಲೆಗೆ ಸಂಬಂಧಿಸಿದಂತೆ ಬೆಂಗಳೂರಿನ ವಕೀಲರ ಸಂಘ ನೀಡಿದ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣ ಕಾರ್ಯಪ್ರವೃತ್ತವಾಗಿ ಸ್ವಯಂಪ್ರೇರಿತ ಪ್ರಕರಣವನ್ನಾಗಿಸಿ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಭೋಜನ ಸಮಯಕ್ಕೂ ಮುಂಚೆ ವಿಚಾರಣೆ ನಡೆಸಿದ ಪೀಠವು ಅಗತ್ಯ ಮಾಹಿತಿಯೊಂದಿಗೆ ಬರುವಂತೆ ಅಡ್ವೊಕೇಟ್‌ ಜನರಲ್‌ ಶಶಿಕಿರಣ ಶೆಟ್ಟಿ ಅವರಿಗೆ ಸೂಚಿಸಿತು. ಭೋಜನ ಸಮಯದ ನಂತರ ಪೀಠವು ವಿಸ್ತೃತವಾಗಿ ಪ್ರಕರಣವನ್ನು ಆಲಿಸಿತು.

ಪ್ರಮುಖ ಸುದ್ದಿ :-   ಬೆಂಗಳೂರಿನ ಹಲವೆಡೆ ಜೋರಾಗಿ ಮಳೆ

ಸಂತ್ರಸ್ತ ವಕೀಲ ಪ್ರೀತಂ ಅವರ ಹೇಳಿಕೆ ದಾಖಲಿಸಿಕೊಳ್ಳಲಾಗಿದ್ದು, ಅದರ ಅನ್ವಯ ಐಪಿಸಿ ಸೆಕ್ಷನ್‌ಗಳಾದ 506, 341, 307, 324, 326 ಮತ್ತು 504 ಜೊತೆಗೆ 149 ಅಡಿ ಚಿಕ್ಕಮಗಳೂರು ಟೌನ್‌ ಠಾಣೆಯಲ್ಲಿ ಡಿಸೆಂಬರ್‌ 1ರ ಮಧ್ಯರಾತ್ರಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಗಂಭೀರತೆ ಅರಿತು ಮತ್ತು ಕರ್ತವ್ಯಲೋಪದ ಮೇಲೆ ಆರು ಮಂದಿ ಪೊಲೀಸರನ್ನು ಡಿಸೆಂಬರ್‌ 1ರಂದು ಅಮಾನತು ಮಾಡಲಾಗಿದೆ. ಈ ಪೈಕಿ ಒಬ್ಬರು ಪಿಎಸ್‌ಐ, ಒಬ್ಬರು ಸಹಾಯಕ ಪೊಲೀಸ್‌ ಇನ್‌ಸ್ಪೆಕ್ಟರ್‌ ಮತ್ತು ನಾಲ್ವರು ಪೇದೆಗಳಾಗಿದ್ದಾರೆ. ಪ್ರಕರಣದ ತನಿಖೆಯನ್ನು ಚಿಕ್ಕಮಗಳೂರು ಉಪವಿಭಾಗದ ಡಿವೈಎಸ್‌ಪಿ ಎಚ್‌ ಎಂ ಶೈಲೇಂದ್ರ ಅವರಿಗೆ ವಹಿಸಲಾಗಿದೆ. ಚಿಕ್ಕಮಗಳೂರಿನ ಮಲ್ಲೇಗೌಡ ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧಿಕಾರಿಯಿಂದಲೂ ವರದಿಯನ್ನೂ ತರಿಸಿಕೊಳ್ಳಲಾಗಿದೆ ಎಂದು ಎಜಿ ಸಲ್ಲಿಸಿರುವ ಮೆಮೊದಲ್ಲಿ ತಿಳಿಸಲಾಗಿದೆ.

 

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement