ಡಿಕೆ ಶಿವಕುಮಾರ ವಿರುದ್ಧದ ಸಿಬಿಐ ತನಿಖೆಗೆ ಅನುಮತಿ ಹಿಂಪಡೆದ ರಾಜ್ಯ ಸರ್ಕಾರ : ನಿರ್ಧಾರ ಪ್ರಶ್ನಿಸಿ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ ಶಾಸಕ ಯತ್ನಾಳ

ಬೆಂಗಳೂರು : ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದ ತನಿಖೆಗೆ ಬಿಜೆಪಿ ನೇತೃತ್ವದ ಹಿಂದಿನ ರಾಜ್ಯ ಸರ್ಕಾರವು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ನೀಡಿದ್ದ ಅನುಮತಿ ಹಿಂಪಡೆದಿರುವ ರಾಜ್ಯದ ಕಾಂಗ್ರೆಸ್‌ ಸರ್ಕಾರದ ಆದೇಶ ಪ್ರಶ್ನಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಕರ್ನಾಟಕ ಹೈಕೋರ್ಟ್‌ ಗೆ ರಿಟ್‌ ಅರ್ಜಿ ಸಲ್ಲಿಸಿದ್ದಾರೆ.
ಡಿ ಕೆ ಶಿವಕುಮಾರ ಅವರ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿದ್ದ ಅನುಮೋದನೆಯನ್ನು ನವೆಂಬರ್‌ 28ರಂದು ರಾಜ್ಯ ಸರ್ಕಾರ ಹಿಂಪಡೆದಿರುವ ಆದೇಶವು ಕಾನೂನುಬಾಹಿರ ಎಂದು ಘೋಷಿಸಬೇಕು. ತನಿಖೆ ಪೂರ್ಣಗೊಳಿಸಿ ವಿಚಾರಣಾಧೀನ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲು ಸಿಬಿಐಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಅರ್ಜಿ ಇತ್ಯರ್ಥವಾಗುವವರೆಗೆ ರಾಜ್ಯ ಸರ್ಕಾರದ ಆಕ್ಷೇಪಾರ್ಹ ಆದೇಶಕ್ಕೆ ತಡೆ ನೀಡಬೇಕು ಎಂದು ಮಧ್ಯಂತರ ಕೋರಿಕೆ ಸಲ್ಲಿಸಲಾಗಿದೆ.

ಶಾಸಕ ಯತ್ನಾಳ ಅವರ ಪರವಾಗಿ ವಕೀಲ ವೆಂಕಟೇಶ ದಳವಾಯಿ ಅವರು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠದ ಮುಂದೆ ಬುಧವಾರ ಪ್ರಕರಣ ಉಲ್ಲೇಖಿಸಿದರು. ಈ ಹಿನ್ನೆಲೆಯಲ್ಲಿ ಸಂಜೆ ಪ್ರಕರಣ ಕೈಗೆತ್ತಿಗೊಂಡ ಪೀಠದ ಮುಂದೆ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು ಅರ್ಜಿಯು ನಿರ್ವಹಣೆಗೆ ಅರ್ಹವಾಗಿಲ್ಲ ಎಂದು ವಾದಿಸಿದರು.
ಸಿಬಿಐ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ ಕಾನೂನಿನ ಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಅರ್ಜಿದಾರರ ಪರ ವಕೀಲ ದಳವಾಯಿ ಅವರು ಅರ್ಜಿಯು ನಿರ್ವಹಣೆಗೆ ಅರ್ಹವಾಗಿದೆ ಎಂದು ಸಾಬೀತುಪಡಿಸಲಾಗುವುದು ಎಂದು ಹೇಳಿದ್ದಾರೆ ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಡಿಸೆಂಬರ್‌ 15ಕ್ಕೆ ಮೂಂದೂಡಲಾಗಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ತಿಳಿಸಿದೆ.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ; ಆರೋಪಿ ಕಾಲಿಗೆ ಗುಂಡೇಟು

2019ರ ಸೆಪ್ಟೆಂಬರ್‌ 25ರಂದು ತನಿಖೆ ನಡೆಸಲು ಸಿಬಿಐಗೆ ರಾಜ್ಯ ಸರ್ಕಾರ ಅನುಮತಿಸಿತ್ತು. ಇದನ್ನು ಕಾಂಗ್ರೆಸ್‌ ನೇತೃತ್ವದ ಸರ್ಕಾರವು 2023ರ ನವೆಂಬರ್‌ 28ರಂದು ಹಿಂಪಡೆದಿತ್ತು. ಇದಕ್ಕೂ ಮುನ್ನ ಸಿಬಿಐ ತನಿಖೆ ಪ್ರಶ್ನಿಸಿ ಡಿ.ಕೆ. ಶಿವಕುಮಾರ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ನ ಏಕಸದಸ್ಯ ಪೀಠ ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಡಿ ಕೆ ಶಿವಕುಮಾರ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ವಿಚಾರಣಾ ಹಂತದಲ್ಲಿರುವಾಗಲೇ ಕಾಂಗ್ರೆಸ್‌ ಸರ್ಕಾರ ಸಿಬಿಐಗೆ ತನಿಖೆ ನಡೆಸಲು ನೀಡಿದ್ದ ಅನುಮತಿ ಹಿಂಪಡೆದಿತ್ತು. ಹೀಗಾಗಿ, ಡಿ ಕೆ ಶಿವಕುಮಾರ ಮೇಲ್ಮನವಿ ಹಿಂಪಡೆದಿದ್ದರು.
ಇಲ್ಲಿಯೂ ಯತ್ನಾಳ ಪರವಾಗಿ ಮಧ್ಯಪ್ರವೇಶಿಕೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಇದಕ್ಕೆ ನ್ಯಾಯಾಲಯವು ನಿರಾಕರಿಸಿತ್ತು. ಹಾಗೂ ಸ್ವತಂತ್ರವಾಗಿ ಅರ್ಜಿ ಸಲ್ಲಿಸುವ ಮೂಲಕ ಸರ್ಕಾರದ ನಿರ್ಧಾರ ಪ್ರಶ್ನಿಸಬಹುದು ಎಂದು ಹೇಳಿತ್ತು. ಈಗ ಯತ್ನಾಳ ಅರ್ಜಿ ಸಲ್ಲಿಸಿದ್ದಾರೆ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement