ಅಲಿಘರ್ : ಉತ್ತರ ಪ್ರದೇಶದ ಅಲಿಘರ್‌ನಲ್ಲಿ ಪಾಸ್‌ಪೋರ್ಟ್ ಪರಿಶೀಲನೆಗಾಗಿ ಪೊಲೀಸ್ ಠಾಣೆಗೆ ತೆರಳಿದ್ದ ಮಹಿಳೆಯೊಬ್ಬರ ತಲೆಗೆ ಶುಕ್ರವಾರ ಸಬ್ ಇನ್‌ಸ್ಪೆಕ್ಟರ್ (ಎಸ್‌ಐ) ಅವರ ಪಿಸ್ತೂಲ್‌ನಿಂದ ಆಕಸ್ಮಿಕವಾಗಿ ಗುಂಡು ಹಾರಿ ತೀವ್ರವಾಗಿ ಗಾಯಗೊಂಡು ಘಟನೆ ನಡೆದಿದೆ. ಇಡೀ ಘಟನೆ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ.
ಈ ಘಟನೆ ಶುಕ್ರವಾರ ಮಧ್ಯಾಹ್ನ 2:50 ಕ್ಕೆ ನಡೆದಿದೆ ಎಂದು ಅಲಿಗಢದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಕಲಾನಿಧಿ ನೈತಾನಿ ತಿಳಿಸಿದ್ದಾರೆ.
ಮಹಿಳೆ ಇಶ್ರತ್ ತನ್ನ ಮಗನೊಂದಿಗೆ ಠಾಣೆಗೆ ಬಂದು ಸ್ವಲ್ಪ ಹೊತ್ತು ನಿಂತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಗೋಚರಿಸಿದೆ. ಸ್ವಲ್ಪ ಸಮಯದ ನಂತರ, ಒಬ್ಬ ಪೊಲೀಸ್ ಅಧಿಕಾರಿ ಬಂದು ಎಸ್‌ಐ ಮನೋಜ ಶರ್ಮಾಗೆ ಪಿಸ್ತೂಲ್ ನೀಡಿದರು. ಎಸ್‌ಐ ಪಿಸ್ತೂಲ್ ಕ್ಲೀನ್ ಮಾಡುತ್ತಿದ್ದಾಗ ಹಾರಿದ ಗುಂಡು ಮಹಿಳೆಯ ಮೇಲೆ ತಗುಲಿ ಮಹಿಳೆ ನೆಲಕ್ಕೆ ಬೀಳುವುದು ವೀಡಿಯೊದಲ್ಲಿ ಕಂಡುಬಂದಿದೆ.
ಗಾಯಗೊಂಡ ಮಹಿಳೆಯನ್ನು ಕೂಡಲೇ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ಮಂಝೂರ್ ಹ್ಯಾರಿಸ್ ಖಾನ್ ಅವರು, “ಆಕೆಯ ತಲೆಯಲ್ಲಿ ಇನ್ನೂ ಬುಲೆಟ್ ಇದೆ. ಆಕೆಗೆ ಆಪರೇಷನ್ ಮಾಡುವ ನಿರ್ಧಾರವನ್ನು ಇನ್ನೂ ಪರಿಶೀಲಿಸಲಾಗುತ್ತಿದೆ” ಎಂದು ಹೇಳಿದ್ದಾರೆ.
ಗುಂಡು ಇಶ್ರತ್ ಅವರ ತಲೆಯ ಹಿಂಭಾಗಕ್ಕೆ ತಗುಲಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಎಸ್‌ಐ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಎಸ್‌ಎಸ್‌ಪಿ ನೈತಾನಿ ತಿಳಿಸಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
ಕರ್ತವ್ಯಲೋಪ ಎಸಗಿದ ಎಸ್‌ಐ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಆತ ತಲೆಮರೆಸಿಕೊಂಡಿರುವುದರಿಂದ ಪೊಲೀಸ್ ಇನ್‌ಸ್ಪೆಕ್ಟರ್‌ನನ್ನು ಬಂಧಿಸಲು ತಂಡವನ್ನು ನಿಯೋಜಿಸಿದ್ದೇವೆ ಎಂದು ನೈತಾನಿ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ