ಹಾಸನ : ಹಾಸನದ ಬೇಲೂರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯರ್ತರ ಸಭೆಯಲ್ಲಿ ಮಾರಾಮಾರಿ ನಡೆದಿದೆ. ಕುರ್ಚಿಗಳನ್ನು ಹಿಡಿದು ಹೊಡೆದಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಸಭೆಗಾಗಿ ಹಾಕಲಾಗಿದ್ದ ಕುರ್ಚಿಗಳನ್ನು ಒಡೆದು ಪುಡಿ, ಪುಡಿ ಮಾಡಿದ್ದಾರೆ.
ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ರಾಜ್ಯದ ಆಡಳಿತ ಪಕ್ಷವಾದ ಕಾಂಗ್ರೆಸ್ ರಾಜ್ಯದಲ್ಲಿ 20 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿದೆ. ಸ್ಥಳೀಯ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮಾಜಿಸಚಿವ ಬಿ.ಶಿವರಾಂ ಬೇಲೂರು ತಾಲೂಕಿನ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಕರೆದಿದ್ದರು. ಈ ಕಾರ್ಯಕರ್ತರ ಸಭೆಯ ಇಬ್ಬರು ಕಾಂಗ್ರೆಸ್ ನಾಯಕರ ಬೆಂಬಲಿಗರು ಪರಸ್ಪರ ಕೈ ಕೈ ಮಿಲಾಯಿಸಿಕೊಂಡು ಹೊಡೆದಾಡಿಕೊಂಡಿದ್ದಾರೆ.
ಕಾಂಗ್ರೆಸ್‌ನ ಲೋಕಸಭಾ ಟಿಕೆಟ್ ಆಕಾಂಕ್ಷಿ ಜತ್ತೇನಹಳ್ಳಿ ರಾಮಚಂದ್ರ ಹಾಗೂ ಸ್ಥಳೀಯ ಮುಖಂಡ ಹಾಗೂ ಕಳೆದ ಬಾರಿಯ ಟಿಕೆಟ್ ಆಕಾಂಕ್ಷಿ ಗ್ರಾನೈಟ್ ರಾಜಶೇಖರ್ ಆಗಮಿಸಿದ್ದರು. ಸಭೆಯಲ್ಲಿ ಮಾತನಾಡುತ್ತಿದ್ದ ಬಿ.ಶಿವರಾಂ ಅವರು, ನಮ್ಮ ಕಾರ್ಯಕರ್ತರು, ಮುಖಂಡರಲ್ಲಿ ಒಗ್ಗಟ್ಟು ಇಲ್ಲದಿರುವುದೇ ಬೇಲೂರಿನಲ್ಲಿ ಕಾಂಗ್ರೆಸ್ ಸೋಲಲು ಕಾರಣ ಎಂದು ಹೇಳಿದ ನಂತರ ರಾಜಶೇಖರ ಬೆಂಬಲಿಗರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ.
ಈ ವೇಳೆ ಬಿ.ಶಿವರಾಂ ವಿರುದ್ಧ ಗ್ರಾನೈಟ್ ರಾಜಶೇಖರ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂತರ ಮತ್ತೊಂದು ಗುಂಪು ಇದಕ್ಕೆ ಪ್ರತಿಯಾಗಿ ಆಕ್ಷೇಪಿಸಿದ್ದಾರೆ. ನಂತರ ಇಬ್ಬರು ನಾಯಕರ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಗಲಾಟೆ ವಿಕೋಪಕ್ಕೆ ತಿರುಗಿ ಕೈಕೈ ಮಿಲಾಯಿಸಿಕೊಂಡಿದ್ದಾರೆ. ಕೆಲವರು ಕುರ್ಚಿಗಳನ್ನು ಹಿಡಿದು ಹೊಡೆದಾಡಿಕೊಂಡಿದ್ದಾರೆ. ಕೆಲ ಕುರ್ಚಿಗಳು ಪುಡಿ ಪುಡಿಯಾಗಿದೆ. ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ. ಗಲಾಟೆಯಲ್ಲಿ ಹಲವರಿಗೆ ಗಾಯಗಳಾಗಿವೆ. ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಿಮ್ಮ ಕಾಮೆಂಟ್ ಬರೆಯಿರಿ