ಬೆಂಗಳೂರು: ನಟ ಶಿವರಾಜಕುಮಾರ (ShivaRajkumar) ಅವರಿಗೆ ಲೋಕಸಭೆಗೆ ಸ್ಪರ್ಧಿಸುವಂತೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಆಹ್ವಾನ ನೀಡಿದ್ದಾರೆ. ಆದರೆ, ನಟ ಶಿವರಾಜಕುಮಾರ ಅವರು ಈ ಆಫರ್ ಅನ್ನು ನಯವಾಗಿಯೇ ತಿರಸ್ಕರಿಸಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ನಡೆದ ಈಡಿಗ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ ಅವರು, ವೇದಿಕೆಯಲ್ಲಿ ಕುಳಿತಿದ್ದಾಗ ನಾನು ನಟ ಶಿವರಾಜಕುಮಾರ ಅವರಿಗೆ ನೀವು ರಾಜಕೀಯಕ್ಕೆ ಬಂದು ಬಿಡಿ. ನಿಮಗೆ ಲೋಕಸಭೆಗೆ ಟಿಕೆಟ್ ಕೊಡುತ್ತೇವೆ ಎಂದು ಹೇಳಿದೆ. ಅದಕ್ಕೆ ಶಿವಣ್ಣ ಅವರು ನಾನು ಈಗಾಗಲೇ ಐದಾರು ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ ಎಂದು ಹೇಳಿದರು. ಆಗ ನಾನು, ಎಲ್ಲರಿಗೂ ರಾಜಕೀಯದಲ್ಲಿ ಒಳ್ಳೆಯ ಅವಕಾಶ ಸಿಗುವುದಿಲ್ಲ. ಲೋಕಸಭೆ ಪ್ರವೇಶ ಮಾಡುವ ಭಾಗ್ಯ ಸಿಗಲಾರದು. ನಿಮಗೆ ಈಗ ಆ ಅದೃಷ್ಟ ಬಂದಿದೆ. ನೀವು ಚುನಾವಣೆಗೆ ಸ್ಪರ್ಧಿಸಿ ಎಂದು ಹೇಳಿದ್ದೇನೆ ಎಂದು ವೇದಿಕೆಯಲ್ಲಿ ಹೇಳಿದರು.
ಡಿ.ಕೆ. ಶಿವಕುಮಾರ ಭಾಷಣದ ನಂತರ ಮಾತನಾಡಿದ ಶಿವರಾಜಕುಮಾರ ಅವರು, ನನಗೆ ಬಣ್ಣ ಹಚ್ಚುವುದಷ್ಟೇ ಗೊತ್ತು. ನಮ್ಮ ತಂದೆಯವರು ನನಗೆ ಅದನ್ನು ಮಾತ್ರ ಹೇಳಿಕೊಟ್ಟಿದ್ದಾರೆ. ಹಾಗಾಗಿ ನಾನು ಬಣ್ಣ ಹಚ್ಚುವುದನ್ನು ಮಾತ್ರವೇ ಮಾಡುತ್ತೇನೆ. ಯಾವುದೇ ಕಾರಣಕ್ಕೂ ನಾನು ರಾಜಕೀಯಕ್ಕೆ ಬರುವುದಿಲ್ಲ. ಆದರೆ, ನನ್ನ ಹೆಂಡತಿ ಗೀತಾ ರಾಜಕೀಯ ಹಿನ್ನೆಲೆಯಿಂದ ಬಂದಿದ್ದರಿಂದ ಅವರಿಗೆ ರಾಜಕೀಯವೆಂದರೆ ಇಷ್ಟವಿದೆ. ಹೆಂಡತಿ ಇಷ್ಟಪಟ್ಟಿದ್ದನ್ನು ನೆರವೇರಿಸುವುದು ಗಂಡನಾದವನ ಕರ್ತವ್ಯ. ಹಾಗಾಗಿ ಆಕೆಗೆ ನನ್ನ ಬೆಂಬಲ ಇರುತ್ತದೆ ಎಂದು ಹೇಳುವ ಮೂಲಕ ಆಫರ್ ಅನ್ನು ನಯವಾಗಿ ತಿರಸ್ಕರಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ