ಲಕ್ನೋ : ಅಯೋಧ್ಯೆಯ ರಾಮಮಂದಿರದಲ್ಲಿ ಜನವರಿ 22ರಂದು ನಡೆಯಲಿರುವ ಭಗವಾನ್ ಶ್ರೀರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಗೆ ಮುನ್ನ ಭಗವಾನ್ ರಾಮನ ಜೀವನಗಾಥೆ ಸಾರುವ ನೂರು ವಿಗ್ರಹಗಳೊಂದಿಗೆ ಮೆರಮಣಿಗೆ ನಡೆಸಲಾಗುವುದು ಎಂದು ಶಿಲ್ಪಿ ರಂಜಿತ್ ಮಂಡಲ್ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಭಗವಾನ್ ಶ್ರೀರಾಮನ ಜನನದಿಂದ ವನವಾಸದ ವರೆಗಿನ ಜೀವನ, ರಾವಣನ ವಿರುದ್ಧದ ವಿಜಯ ಹಾಗೂ ಅಯೋಧ್ಯೆಗೆ ಹಿಂದಿರುಗಿದ್ದು ಸೇರಿದಂತೆ ರಾಮಾಯಣ ಕಥೆ ಸಾರುವ ಅನೇಕ ಪ್ರತಿಮೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
‘ವಿಗ್ರಹಗಳನ್ನು ಸಿದ್ಧಪಡಿಸಲು ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಈಗಾಗಲೇ 60 ಪ್ರತಿಮೆಗಳನ್ನು ತಯಾರಿಸಲಾಗಿದೆ’ ಎಂದು ರಂಜಿತ್ ಮಂಡಲ್ ತಿಳಿಸಿದ್ದಾರೆ.
‘ಅಮೃತಶಿಲೆಯಿಂದ ನಿರ್ಮಿಸಲಾಗಿರುವ ಕಮಲದ ಹೂವಿನ ಮಾದರಿಯ ಪೀಠದ ಮೇಲೆ ಭಗವಾನ್ ರಾಮನ ಮೂರ್ತಿಯನ್ನು ಸ್ಥಾಪಿಸಲಾಗುವುದು. ಇದೇ ಮಾದರಿಯಲ್ಲಿಯೇ ಶ್ರೀರಾಮನ ಪೀಠವನ್ನು ಗರ್ಭಗುಡಿಯಲ್ಲಿಯೂ ಪ್ರತಿಷ್ಠಾಪಿಸಲಾಗುವುದು. ಪೀಠ ಅಥವಾ ಸಿಂಹಾಸನದ ಎತ್ತರವನ್ನು ನಿರ್ಧರಿಸಲಾಗಿದೆ. ರಾಮನವಮಿಯಂದು ಮಧ್ಯಾಹ್ನ 12 ಗಂಟೆಗೆ ಸೂರ್ಯನ ಕಿರಣಗಳು ಶ್ರೀರಾಮನ ಹಣೆಯನ್ನು ಸ್ಪರ್ಶಿಸಿದ ಬೆಳಕು ಗರ್ಭಗುಡಿಯನ್ನು ಬೆಳಗಲಿದೆ’ ಎಂದು ಟ್ರಸ್ಟಿ ಅನಿಲ್ ಮಿಶ್ರಾ ಮಾಹಿತಿ ಹಂಚಿಕೊಂಡಿದ್ದಾರೆ.
ಜನವರಿ 22 ರಂದು ಮಹಾಮಸ್ತಕಾಭಿಷೇಕ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ನೂರಾರು ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ನಿಮ್ಮ ಕಾಮೆಂಟ್ ಬರೆಯಿರಿ