ಲೋಕಸಭೆ-ರಾಜ್ಯಸಭೆ ಸದನದ ಕಲಾಪಕ್ಕೆ ಅಡ್ಡಿ : ವಿಪಕ್ಷಗಳ 15 ಸಂಸದರ ಅಮಾನತು

ನವದೆಹಲಿ : ಸಂಸತ್ತಿನಲ್ಲಿ ಅಶಿಸ್ತಿನ ವರ್ತನೆಗಾಗಿ ಒಬ್ಬ ರಾಜ್ಯಸಭೆ ಮತ್ತು 14 ಲೋಕಸಭೆ ಸಂಸದರನ್ನು ಅಮಾನತುಗೊಳಿಸಲಾಗಿದೆ. ಸಂಸತ್ತಿನ ಉಭಯ ಸದನಗಳಲ್ಲಿ ಗುರುವಾರ (ಡಿಸೆಂಬರ್ 14) ಹೈ ಡ್ರಾಮಾ ನಡೆಯಿತು. ಲೋಕಸಭೆಯಲ್ಲಿ ಭದ್ರತಾ ಲೋಪದ ನಂತರ ಒಂದು ದಿನದ ನಂತರ – ಉಭಯ ಸದನಗಳಲ್ಲಿ ಗೃಹ ಸಚಿವ ಅಮಿತ್‌ ಶಾ ಅವರ ಹೇಳಿಕೆಗೆ ಪತ್ತಾಯಿಸಿ ವಿಪಕ್ಷಗಳ ಸದಸ್ಯರು ಘೋಷಣೆಗಳನ್ನು ಕೂಗಿ ಕಲಾಪಕ್ಕೆ ಅಡ್ಡಿಪಡಿಸಿದ್ದರಿಂದ 15 ಸಂಸದರನ್ನು ಅಮಾನತುಗೊಳಿಸಲಾಯಿತು.
ಮಾಣಿಕಂ ಠಾಗೋರ್, ಕನಿಮೋಳಿ, ಪಿ.ಆರ್. ನಟರಾಜನ್, ವಿ.ಕೆ. ಶ್ರೀಕಾಂತಂ, ಬೇನಿ ಬಹನ್, ಕೆ.ಸುಬ್ರಹ್ಮಣ್ಯಂ, ಎಸ್‌.ಆರ್. ಪ್ರತಿಬನ್, ಎಸ್. ವೆಂಕಟೇಶನ್ ಮತ್ತು ಮೊಹಮ್ಮದ್ ಜಾವೇದ್ ಲೋಕಸಭೆಯಿಂದ ಅಮಾನತುಗೊಂಡ ಸಂಸದರಲ್ಲಿ ಸೇರಿದ್ದಾರೆ. ತೃಣಮೂಲ ಕಾಂಗ್ರೆಸ್‌ನ ಡೆರೆಕ್ ಒ’ಬ್ರೇನ್ ರಾಜ್ಯಸಭೆಯಿಂದ ಅಮಾನತುಗೊಂಡ ಏಕೈಕ ಸಂಸದರಾಗಿದ್ದಾರೆ. ಅಮಾನತುಗೊಂಡಿರುವ 15 ಸಂಸದರ ಪೈಕಿ ಒಂಬತ್ತು ಮಂದಿ ಕಾಂಗ್ರೆಸ್‌, ಇಬ್ಬರು ಸಿಪಿಎಂ, ಇಬ್ಬರು ಡಿಎಂಕೆ ಮತ್ತು ತಲಾ ಒಬ್ಬರು ಸಿಪಿಐ ಮತ್ತು ಟಿಎಂಸಿಯವರಾಗಿದ್ದಾರೆ. ಅವರನ್ನು ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಲಾಗಿದೆ.

ಲೋಕಸಭೆಯಲ್ಲಿ ಬುಧವಾರ ನಡೆದ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಸಂಸತ್ತಿನೊಳಗೆ ಪ್ರತಿಪಕ್ಷಗಳ ಪ್ರತಿಭಟನೆ ನಂತರ ಅಮಾನತು ಮಾಡಲಾಗಿದೆ. ಪ್ರತಿಭಟನೆಯಿಂದಾಗಿ ಗುರುವಾರ ಉಭಯ ಸದನಗಳು ಪದೇಪದೇ ಮುಂದೂಡಲ್ಪಟ್ಟವು. ಡಿಸೆಂಬರ್ 22 ರಂದು ಮುಕ್ತಾಯಗೊಳ್ಳಲಿರುವ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಐವರು ಕಾಂಗ್ರೆಸ್ ಸಂಸದರನ್ನು ಅಮಾನತುಗೊಳಿಸುವ ನಿರ್ಣಯವನ್ನು ಲೋಕಸಭೆ ಗುರುವಾರ ಅಂಗೀಕರಿಸಿತು.
ಡಿಎಂಕೆ ಸಂಸದೆ ಕನಿಮೊಳಿ ಮಾತನಾಡಿ, ವೀಕ್ಷಕರ ಗ್ಯಾಲರಿಯಿಂದ ಲೋಕಸಭೆಗೆ ಜಿಗಿದವರಿಗೆ ಪಾಸ್ ನೀಡಿದ ಬಿಜೆಪಿ ಸಂಸದ ಪ್ರತಾಪ ಸಿಂಹ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ.

ಪ್ರಮುಖ ಸುದ್ದಿ :-   ಏಪ್ರಿಲ್‌ ತಿಂಗಳಲ್ಲಿ ದಾಖಲೆಯ ಪ್ರಮಾಣದ ಜಿಎಸ್‌ಟಿ ಸಂಗ್ರಹ ; ಕರ್ನಾಟಕಕ್ಕೆ 2ನೇ ಸ್ಥಾನ

‘ಈ ಸಂಸದರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ಮಹುವಾ ಪ್ರಕರಣದಲ್ಲಿ ಏನಾಯಿತು ಎಂದು ನಾವು ನೋಡಿದ್ದೇವೆ. ವಿಚಾರಣೆ ಕೂಡ ಪೂರ್ಣಗೊಳ್ಳದೆ, ಆಕೆಯನ್ನು ಅನರ್ಹಗೊಳಿಸಲಾಗಿದೆ. ಆದರೆ ಈ ಸಂಸದರನ್ನು ಅಮಾನತುಗೊಳಿಸಲಾಗಿಲ್ಲ. ಅವರು ನಮ್ಮೊಂದಿಗೆ ಸಂಸತ್ತಿನ ಒಳಗೆ ಇದ್ದಾರೆ. ಮತ್ತು ಈ ವಿಷಯದಲ್ಲಿ ನಾವು ಪ್ರತಿಭಟಿಸಿದಾಗ ಮತ್ತು ಪ್ರಧಾನಿ ಮತ್ತು ಗೃಹ ಸಚಿವರು ಬಂದು ಸದನದಲ್ಲಿ ಹೇಳಿಕೆ ನೀಡಬೇಕೆಂದು ನಾವು ಬಯಸಿದಾಗ, ಅವರು ಹಾಗೆ ಮಾಡಲು ಸಿದ್ಧರಿಲ್ಲ. ಮತ್ತು ನಾವು ಪ್ರತಿಭಟಿಸಿದಾಗ ಅವರು ಎಲ್ಲಾ ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸುತ್ತಿದ್ದಾರೆ. ಮೊದಲು ಐವರನ್ನು ಅಮಾನತು ಮಾಡಿ, ನಂತರ ಒಂಬತ್ತು ಮಂದಿಯನ್ನು ಅಮಾನತುಗೊಳಿಸಿದರು. ಹಾಗಾದರೆ ಇದು ಪ್ರಜಾಪ್ರಭುತ್ವ ಹೇಗಾಗುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement