ನವದೆಹಲಿ: ತಕ್ಷಣದಿಂದ ಜಾರಿಗೆ ಬರುವಂತೆ ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಜಿತು ಪಟ್ವಾರಿ ಅವರನ್ನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇಮಕ ಮಾಡಿದ್ದಾರೆ. ನಿರ್ಗಮಿತ ಅಧ್ಯಕ್ಷ ಕಮಲನಾಥ ಬದಲಿಗೆ ಪಟ್ವಾರಿ ಅವರನ್ನು ನೇಮಕ ಮಾಡಲಾಗಿದೆ.
ಕಾಂಗ್ರೆಸ್ ಪಕ್ಷವು ಶನಿವಾರ ಪತ್ರಿಕಾ ಹೇಳಿಕೆಯಲ್ಲಿ “ಕಾಂಗ್ರೆಸ್ ಅಧ್ಯಕ್ಷರು ತಕ್ಷಣವೇ ಜಾರಿಗೆ ಬರುವಂತೆ ಜಿತು ಪಟ್ವಾರಿ ಅವರನ್ನು ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ ಎಂದು ಹೇಳಿದೆ. “ನಿರ್ಮಿತ ಮಧ್ಯಪ್ರದೇಶ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲನಾಥ ಅವರ ಕೊಡುಗೆಗಳನ್ನು ಪಕ್ಷವು ಪ್ರಶಂಸಿಸುತ್ತದೆ” ಎಂದು ತಿಳಿಸಿದೆ.
ಕಾಂಗ್ರೆಸ್ ಅಧಿಕೃತ ಪ್ರಕಟಣೆಯಲ್ಲಿ, ಮಧ್ಯಪ್ರದೇಶ ವಿಧಾನಸಭೆಯಲ್ಲಿ ಉಮಂಗ್ ಶಿಂಗಾರ್ ಅವರನ್ನು ವಿಪಕ್ಷದ ನಾಯಕ ಮತ್ತು ಹೇಮಂತ್ ಕಟಾರೆ ಅವರನ್ನು ಉಪ ನಾಯಕ ಎಂದು ಹೆಸರಿಸಿದೆ.
ರಾವು ಕ್ಷೇತ್ರದಿಂದ ಶಾಸಕರಾಗಿದ್ದ 49 ವರ್ಷದ ಪಟ್ವಾರಿ ಅವರು ಮಧ್ಯಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾಗಿದ್ದರು. ಅವರು 2018 ರಲ್ಲಿ ರೌದಿಂದ ಎರಡನೇ ಬಾರಿಗೆ ಚುನಾವಣೆಯಲ್ಲಿ ಗೆದ್ದರು. ನಂತರ, ಕಮಲನಾಥ ನೇತೃತ್ವದ ಸರ್ಕಾರದಲ್ಲಿ ಪಟ್ವಾರಿ ಅವರನ್ನು ಉನ್ನತ ಶಿಕ್ಷಣ, ಯುವಜನ ಮತ್ತು ಕ್ರೀಡಾ ವ್ಯವಹಾರಗಳ ಸಚಿವರನ್ನಾಗಿ ನೇಮಕ ಮಾಡಲಾಯಿತು.
2018 ರಲ್ಲಿ, ಕಮಲನಾಥ ಅವರನ್ನು ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿ (ಎಂಪಿಸಿಸಿ) ಮುಖ್ಯಸ್ಥರನ್ನಾಗಿ ನೇಮಿಸಿದಾಗ, ಪಟ್ವಾರಿ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಏಪ್ರಿಲ್ 2020 ರಲ್ಲಿ, ಅವರನ್ನು ಕಮಲನಾಥ ಅವರು ರಾಜ್ಯ ಕಾಂಗ್ರೆಸ್‌ನ ಮಾಧ್ಯಮ ಕೋಶದ ಅಧ್ಯಕ್ಷರಾಗಿ ನೇಮಿಸಿದರು.
ಆದಾಗ್ಯೂ, 2023 ರ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ, ಪಟ್ವಾರಿ ಅವರು ಬಿಜೆಪಿಯ ಮಧು ವರ್ಮಾ ವಿರುದ್ಧ 35,522 ಮತಗಳ ಅಂತರದಿಂದ ಕಾಂಗ್ರೆಸ್‌ನಿಂದ ರಾವು ಕ್ಷೇತ್ರದಲ್ಲಿ ಸೋಲನುಭವಿಸಿದರು.
ನವೆಂಬರ್ 17 ರಂದು ನಡೆದ ಚುನಾವಣೆಯಲ್ಲಿ, 230 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 163 ಸ್ಥಾನಗಳನ್ನು ಗೆಲ್ಲುವ ಮೂಲಕ ಮಧ್ಯಪ್ರದೇಶದಲ್ಲಿ ಅಧಿಕಾರವನ್ನು ಉಳಿಸಿಕೊಂಡರೆ, ಕಾಂಗ್ರೆಸ್ 66 ಸ್ಥಾನಗಳಲ್ಲಿ ಗೆಲುವು ಸಾಧಿಸಿ ದೂರದ ಎರಡನೇ ಸ್ಥಾನದಲ್ಲಿದೆ. ಇದು 2018 ರಲ್ಲಿ ಗೆದ್ದ 114 ಸ್ಥಾನಗಳಿಗೆ ಹೋಲಿಸಿದರೆ ಬಹಳ ಕಡಿಮೆಯಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ