ಬೆಂಗಳೂರು: ‘ಕೋವಿಡ್ನ ಕುಲಾಂತರಿ JN.1 ವೈರಾಣು ಹರಡುವಿಕೆ ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಗೆ ಸರ್ಕಾರ ಯಾವುದೇ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
‘ಕೋವಿಡ್ನ ಕುಲಾಂತರಿ JN.1 ವೈರಸ್ ಪತ್ತೆಯಾದ ನಂತರ ರಾಜ್ಯದಲ್ಲಿನ ಕೋವಿಡ್-19ರ ಪರಿಸ್ಥಿತಿ ಕುರಿತು ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ‘ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಆದರೆ ಈಗ ಪತ್ತೆಯಾಗಿರುವ ಕೋವಿಡ್ ಉಪತಳಿ JN.1 ಈವರೆಗೆ ಅಪಾಯಕಾರಿ ಕಂಡುಬಂದಿಲ್ಲ ಎಂದು ಹೇಳಿದರು.
ಜನಸಂದಣಿ ಹೆಚ್ಚು ಇರುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸಿ. ಮಾರ್ಗಸೂಚಿ ಹೊರಡಿಸುವ ಬಗ್ಗೆ ಸಚಿವ ಸಂಪುಟ ಉಪಸಮಿತಿಯಲ್ಲಿ ಚರ್ಚಿಸಲಾಗುವುದು. ಕೋವಿಡ್ಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ತಾಂತ್ರಿಕ ಸಲಹಾ ಸಮಿತಿ ನೀಡುವ ಸಲಹೆಗಳನ್ನು ಅನುಸರಿಸಲಾಗುವುದು’ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ದಿನಕ್ಕೆ 5000 ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಕರ್ನಾಟಕದಲ್ಲಿ ಪ್ರಸ್ತುತ 92 ಸಕ್ರಿಯ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಬೆಂಗಳೂರಿನಲ್ಲೇ 80 ಪ್ರಕರಣಗಳಿವೆ. 72 ಜನ ಮನೆಯಲ್ಲೇ ಪ್ರತ್ಯೇಕವಾಸದಲ್ಲಿದ್ದಾರೆ. ಆಸ್ಪತ್ರೆಗೆ ದಾಖಲಾದ 20ರಲ್ಲಿ 7 ಮಂದಿ ಐಸಿಯು (ICU)ನಲ್ಲಿದ್ದಾರೆ. ಆದರೆ ಇವರಿಗೆ ಇತರ ಆರೋಗ್ಯ ಸಮಸ್ಯೆಗಳಿರುವ ಕಾರಣಕ್ಕೆ ಅವರು ಐಸಿಯುನಲ್ಲಿದ್ದಾರೆ ಎಂದರು.
‘ರಾಜ್ಯದಲ್ಲಿ ಕೋವಿಡ್ ಪರೀಕ್ಷಾ ಪ್ರಮಾಣ ದಿನಕ್ಕೆ 5 ಸಾವಿರಕ್ಕೆ ಹೆಚ್ಚಿಸಲಾಗಿದೆ. ಇದರಲ್ಲಿ 1500 ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಹಾಗೂ 3500 ಆರ್ಟಿಪಿಸಿಆರ್ ಪರೀಕ್ಷೆಗಳಿವೆ. ಜನರು ಆತಂಕ ಪಡುವ ಅಗತ್ಯವಿಲ್ಲ. ಆದರೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು. ಸರ್ಕಾರವೂ ಎಲ್ಲಾ ರೀತಿಯ ಅಗತ್ಯ ಮುನ್ನೆಚ್ಚರಿಕೆ ವಹಿಸಲಿದೆ’ ಎಂದು ಹೇಳಿದ್ದಾರೆ.
ಕೇರಳದಲ್ಲಿ 2041, ತಮಿಳುನಾಡಿನಲ್ಲಿ 77, ಮಹಾರಾಷ್ಟ್ರದಲ್ಲಿ 35, ಗೋವಾದಲ್ಲಿ 23 ಹಾಗೂ ಗುಜರಾತ್ನಲ್ಲಿ 12 ಸಕ್ರಿಯ ಪ್ರಕರಣಗಳು ವರದಿಯಾಗಿವೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
ಸರ್ಕಾರದ ಮಾರ್ಗಸೂಚಿ
60 ವರ್ಷ ಮೇಲ್ಪಟ್ಟವರು ಮೂತ್ರಪಿಂಡ, ಹೃದಯ, ಯಕೃತ್ ಸಮಸ್ಯೆಗಳಿಂದ ಬಳಲುತ್ತಿರುವವರು, ಗರ್ಭಿಣಿ ಹಾಗೂ ಬಾಣಂತಿಯರು ಮಾಸ್ಕ್ ಧರಿಸಬೇಕು. ಅವರು ಮುಚ್ಚಿದ, ಹೆಚ್ಚು ಗಾಳಿಯಾಡದ ಸ್ಥಳಗಳಿಗೆ ಹಾಗೂ ಜನಸಂದಣಿ ಸ್ಥಳಗಳಿಗೆ ಭೇಟಿ ನೀಡದಿರುವುದು ಸೂಕ್ತ.
ಉಸಿರಾಟದ ಸಮಸ್ಯೆ, ಜ್ವರ, ಕೆಮ್ಮು, ಶೀತ, ನೆಗಡಿ ಇತ್ಯಾದಿಗಳಿಂದ ಬಳಲುತ್ತಿರುವವರು ವೈದ್ಯರ ಜೊತೆ ಸಮಾಲೋಚಿಸಬೇಕು ಹಾಗೂ ಮಾಸ್ಕ್ ಧರಿಸಬೇಕು
ಅನಾರೋಗ್ಯ ಪೀಡಿತರಾದರೆ ಮನೆಯಲ್ಲಿದ್ದು, ಇತರರೊಂದಿಗೆ ಸಂಪರ್ಕ ಕಡಿಮೆ ಮಾಡುವುದು ಸೂಕ್ತ.
ಜನಸಂದಣಿಯ ಪ್ರದೇಶದಲ್ಲಿ ಮಾಸ್ಕ್ ಧರಿಸುವುದು ಉತ್ತಮ.
ವಿದೇಶ ಪ್ರವಾಸದ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದು.
ಕೇರಳ ಮತ್ತು ತಮಿಳುನಾಡು ಗಡಿ ಭಾಗದಲ್ಲಿ ಜ್ವರದ ಪ್ರಕರಣಗಳ ಮೇಲೆ ನಿಗಾ ವಹಿಸುವುದು, ಪರೀಕ್ಷೆ ಮತ್ತು ವರದಿ ವ್ಯವಸ್ಥೆ.
ನಿಮ್ಮ ಕಾಮೆಂಟ್ ಬರೆಯಿರಿ