ಮೈಸೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾಗಿದ್ದ ಹಿಬಾಬ್ ನಿಷೇಧ ಆದೇಶ ಹಿಂಪಡೆಯಲು ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರು ಜಿಲ್ಲೆಯ ನಂಜನಗೂಡು ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ಕವಲಂದೆ, ಅಂತರಸಂತೆ, ಜಯಪುರ ಪೊಲೀಸ್ ಠಾಣೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಟ್ಟೆ, ಉಡುಪು, ಜಾತಿ, ಆಧಾರದ ಮೇಲೆ ಸಮಾಜವನ್ನು ವಿಭಜಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಹಿಜಾಬ್ ನಿಷೇಧವನ್ನು ವಾಪಾಸ್ ಪಡೆಯಲು ಹೇಳಿದ್ದೇನೆ. ಹಿಜಾಬ್ ಹಾಕಿಕೊಂಡು ಕಾಲೇಜುಗಳಿಗೆ ಹೋಗಲು ಅವಕಾಶವಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಉಡುಪು, ಊಟ ಮಾಡುವುದು ನಿಮ್ಮ ಆಯ್ಕೆ. ಅದಕ್ಕೆ ನಾವು ಅಡ್ಡಿಪಡಿಸುವುದಿಲ್ಲ. ಮತಕ್ಕಾಗಿ ರಾಜಕಾರಣ ಮಾಡುವುದು ತಪ್ಪು. ಬಡವರಿಗಾಗಿ ನಮ್ಮ ಸರ್ಕಾರ ಕೆಲಸ ಮಾಡುತ್ತದೆ. ಇದರಲ್ಲಿ ರಾಜೀ ಮಾಡಿಕೊಳ್ಳುವ ಪ್ರಶ್ನೆ ಇಲ್ಲ. ಹಿಜಾಬ್ ಧರಿಸಿ ಹೋಗಬಹುದು ಶಾಲಾ-ಕಾಲೇಜಿಗೆ ಹೋಗಬಹುದು ಎಂದು ಹೇಳಿದರು.
ಈ ಮೂಲಕ ಕಾಂಗ್ರೆಸ್ ಸರ್ಕಾರವು ಹಿಂದಿನ ಬಿಜೆಪಿ ಸರ್ಕಾರದ ಶೈಕ್ಷಣಿಕ ಸಂಸ್ಥೆಗಳಲ್ಲಿ ತಂದಿದ್ದ ಹಿಜಾಬ್ ನಿಷೇಧ ಹಿಂಪಡೆದು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹಿಜಾಬ್ ಧರಿಸಿ ತೆರಳಲು ಅವಕಾಶ ನೀಡಲು ಮುಂದಾಗಿದೆ.
ಬಿಜೆಪಿಯವರು ಧರ್ಮದ ಆಧಾರದ ಮೇಲೆ ಭೇದ-ಭಾವ ಮಾಡುತ್ತಾರೆ. ಆದರೆ, ನಾವು ಯಾವುದೇ ಜಾತಿ, ಧರ್ಮಕ್ಕೆ ಕಟ್ಟುಬಿದ್ದಿಲ್ಲ. ನಮ್ಮ ಯೋಜನೆಗಳು ಜಾತಿ ಧರ್ಮಕ್ಕೆ ಸೀಮಿತವಾಗಿಲ್ಲ. ಎಲ್ಲಾ ಬಡವರಿಗೂ ನಮ್ಮ ಯೋಜನೆಗಳು ತಲುಪಬೇಕು ರೂಪಿಸಿದ್ದೇವೆ ಎಂದರು.
ಬಿಜೆಪಿಯವರು ಗ್ಯಾರಂಟಿ ಯೋಜನೆಗಳ ಲಾಭ ಪಯುತ್ತಿಲ್ಲವಾ..?
ನಾವು ಎಲ್ಲ ಜಾತಿ, ಧರ್ಮದವರಿಗೆ ಮಾತ್ರವಲ್ಲ ಎಲ್ಲಾ ಪಕ್ಷದವರಿಗೂ ಅನುಕೂಲ ಆಗುವ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಬಿಜೆಪಿಯವರು 10 ಕೆಜಿ ಅಕ್ಕಿ ಪಡೆಯುತ್ತಿಲ್ಲವಾ ? ಬಿಜೆಪಿಯವರು ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿಲ್ಲವೇ ? ಬಿಜೆಪಿಯವರು ಗೃಹಜ್ಯೋತಿ, ಗೃಹಲಕ್ಷ್ಮೀ ಹಣ ಪಡೆಯುತ್ತಿಲ್ಲವಾ ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ಸುಳ್ಳು ಹೇಳುವವರ ಜತೆ ಹೋಗಬೇಡಿ ಎಂದರು.
ಕ್ಷೇತ್ರದ ಶಾಸಕರಾದ ದರ್ಶನ್ ಧ್ರುವನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಗೃಹ ಸಚಿವರಾದ ಡಾ.ಜಿ.ಪರಮೇಶ್ವರ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಇದ್ದರು.
ನಿಮ್ಮ ಕಾಮೆಂಟ್ ಬರೆಯಿರಿ