ಹಾಸನ: ಇಬ್ಬರು ಮಕ್ಕಳೊಂದಿಗೆ ತಾಯಿ ನಿಗೂಢ ಸಾವು

ಹಾಸನ: ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ನಿಗೂಢವಾಗಿ ಮೃತಪಟ್ಟ ಘಟನೆ ಹಾಸನ ನಗರದ ದಾಸರಕೊಪ್ಪಲಿನಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಮೃತರನ್ನು ಶಿವಮ್ಮ (36) ಹಾಗೂ ಮಕ್ಕಳಾದ ಸಿಂಚು (7) ಹಾಗೂ ಪವನ (10) ಎಂದು ಗುರುತಿಸಲಾಗಿದೆ. ಶಿವಮ್ಮ ಅವರ ಪತಿ ತೀರ್ಥ ಅವರು ಬೇರೆ ತುಮಕೂರಿನ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಕುಟುಂಬ ಒಂದು ಸಣ್ಣ ಮನೆಯಲ್ಲಿ ವಾಸವಾಗಿತ್ತು. ಮಂಗಳವಾರ ಬೆಳಗ್ಗೆ ಕೆಲಸಕ್ಕೆ ಹೋದ ತೀರ್ಥ ಯಾವುದೋ ಕಾರಣಕ್ಕೆ ಪತ್ನಿಗೆ ಕರೆ ಮಾಡಿದ್ದಾರೆ. ಆದರೆ, ಪತ್ನಿ ಕರೆ ಸ್ವೀಕರಿಸಲಿಲ್ಲ. ಇದರಿಂದ ಅನುಮಾನಗೊಂಡ ತೀರ್ಥ ತಕ್ಷಣ ಮನೆಗೆ ಬಂದಿದ್ದಾರೆ. ಆದರೆ ಮನೆ ತಲುಪುವುದು ತಡವಾಗಿದೆ. ಬಾಗಿಲು ತಟ್ಟಿದಾಗ ಹಾಗೂ ಫೋನ್ ಕರೆ ಸ್ವೀಕರಿಸದೇ ಇದ್ದಾಗ ಪತ್ನಿ ನಿದ್ರೆ ಹೋಗಿರಬಹುದು ಎಂದು ಭಾವಿಸಿದ ತೀರ್ಥ ಅವರು ನಂತರ ಮನೆಯ ಮೇಲ್ಛಾವಣಿಗೆ ಹೋಗಿ ಮಲಗಿದ್ದರು.

ಬೆಳಗ್ಗೆ ಕೆಳಗೆ ಬಂದು ಪುನಃ ಬಾಗಿಲು ಬಡಿದರೂ ಬಾಗಿಲು ತೆಗೆಯಲಿಲ್ಲ, ಫೋನ್ ಕರೆಗೂ ಪ್ರತಿಕ್ರಿಯೆ ಬಾರದ್ದರಿಂದ ಅನುಮಾನಗೊಂಡ ಅವರು ಮನೆ ಮಾಲೀಕರ ಸಹಾಯದಿಂದ ಇನ್ನೊಂದು ಕೀ ಪಡೆದು ಬಾಗಿಲು ತೆರೆದು ಒಳಗೆ ಹೋದರು. ಆಗ ಪತ್ನಿ ಮತ್ತು ಇಬ್ಬರು ಮಕ್ಕಳು ಶವವಾಗಿ ಬಿದ್ದಿರುವುದು ಕಂಡುಬಂದಿದೆ. ಮನೆಯ‌ ಹಾಲ್‌ ಮತ್ತು ಅಡುಗೆ ಕೋಣೆಯ ನಡುವಿನ ಜಾಗದಲ್ಲಿ ಮೂವರ ಶವ ಪತ್ತೆಯಾಗಿದೆ. ನೆಲದ ಮೇಲೆ ಕುಳಿತ ತಾಯಿಯ ಕಾಲುಗಳ ಮೇಲೆ ಇಬ್ಬರು ಮಕ್ಕಳೂ ಪ್ರಾಣ ಕಳೆದುಕೊಂಡಿದ್ದರು.
ಸಾವಿಗೆ ಆತ್ಮಹತ್ಯೆ ಕಾರಣವೋ ಅಥವಾ ವಿಷಾನಿಲದ ಪ್ರಭಾವವೋ ಎಂಬುದು ತಿಳಿದುಬಂದಿಲ್ಲ. ಪೆನ್‌ಷನ್‌ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಐಟಿ ಅಧಿಕಾರಿಗಳ ದಾಳಿ, ಕಲಬುರಗಿ ರೈಲ್ವೆ ನಿಲ್ದಾಣದ ಬಳಿ ಕಾರಿನಲ್ಲಿದ್ದ 2 ಕೋಟಿ ರೂ. ವಶಕ್ಕೆ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement