ಗೋಲಾಘಾಟ್: ಅಸ್ಸಾಂನ ಗೋಲಾಘಾಟ್ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ಪ್ರಯಾಣಿಕರ ಬಸ್ ಮತ್ತು ಟ್ರಕ್ ಡಿಕ್ಕಿ ಹೊಡೆದುಕೊಂಡ ನಂತರ ಐವರು ಮಹಿಳೆಯರು ಮತ್ತು ಅಪ್ರಾಪ್ತ ಬಾಲಕ ಸೇರಿದಂತೆ ಕನಿಷ್ಠ 12 ಜನರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 37ರ ದೇರ್ಗಾಂವ್‌ನಲ್ಲಿ ಮುಂಜಾನೆ 5 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಸುಮಾರು 45 ಜನರನ್ನು ಹೊತ್ತ ಬಸ್ ಗೋಲಾಘಾಟ್‌ನಿಂದ ತಿನ್‌ಸುಕಿಯಾ ಕಡೆಗೆ ಹೋಗುತ್ತಿದ್ದಾಗ ಅದೇ ಬದಿಯಲ್ಲಿ ಎದುರುಗಡೆಯಿಂದ ಕಲ್ಲಿದ್ದಲು ತುಂಬಿದ್ದ ಟ್ರಕ್‌ಗೆ ಮುಖಾಮುಖಿ ಡಿಕ್ಕಿಯಾಗಿದೆ.
ಎರಡೂ ವಾಹನಗಳ ಚಾಲಕರು ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಾಳುಗಳನ್ನು ದೇರ್ಗಾಂವ್ ಸಿವಿಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಜೋರ್ಹತ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಜೆಎಂಸಿಎಚ್) ಸ್ಥಳಾಂತರಿಸಲಾಗಿದೆ.
“ಎನ್‌ಎಚ್‌ನ ಒಂದು ಬದಿಯಲ್ಲಿ ರಸ್ತೆ ದುರಸ್ತಿ ನಡೆಯುತ್ತಿದೆ, ಅದಕ್ಕಾಗಿಯೇ ಎರಡೂ ದಿಕ್ಕಿನ ವಾಹನಗಳು ಡಿವೈಡರ್‌ನ ಇನ್ನೊಂದು ಬದಿಯನ್ನು ಬಳಸುತ್ತಿದ್ದವು. ಅತೀ ವೇಗದಲ್ಲಿ ಬರುತ್ತಿದ್ದ ಟ್ರಕ್ ಪ್ರಯಾಣಿಕರ ಬಸ್‌ಗೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ ಎಂದು ಗೋಲಘಾಟ್‌ನ ಜಿಲ್ಲಾಧಿಕಾರಿ ಪಿ ಉದಯ್ ಪ್ರವೀಣ್ ಹೇಳಿದ್ದಾರೆ.
ಬಸ್ಸಿನ ಪ್ರಯಾಣಿಕರು, ಅವರಲ್ಲಿ ಹೆಚ್ಚಿನವರು ಭಾರಲುಖುವಾ ಗ್ರಾಮದವರು ಹಾಗೂ ತಿನ್ಸುಕಿಯಾದ ತಿಲಿಂಗ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ.
“ನಾವು ಬಸ್ ಮತ್ತು ಟ್ರಕ್‌ನಿಂದ 10 ಶವಗಳನ್ನು ಹೊರತೆಗೆದಿದ್ದೇವೆ. ಜೆಎಂಸಿಎಚ್‌ಗೆ ಸ್ಥಳಾಂತರಗೊಂಡ 27 ಗಾಯಾಳುಗಳ ಪೈಕಿ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅತಿವೇಗದ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಸಾವಿನ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ನಾವು ತನಿಖೆಯನ್ನು ಪ್ರಾರಂಭಿಸುತ್ತೇವೆ ಎಂದು ಗೋಲಾಘಾಟ್ ಪೊಲೀಸ್ ವರಿಷ್ಠಾಧಿಕಾರಿ ರಾಜೇನ್ ಸಿಂಗ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ