ಚೆಕ್‌ ಬೌನ್ಸ್‌ ಪ್ರಕರಣ: ಸಚಿವ ಮಧು ಬಂಗಾರಪ್ಪಗೆ ವಿಧಿಸಿದ್ದ ಶಿಕ್ಷೆ ಅಮಾನತು

ಬೆಂಗಳೂರು : ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಜೈಲು ಶಿಕ್ಷೆ ವಿಧಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶವನ್ನು 56ನೇ ಸೆಷನ್ಸ್‌ ನ್ಯಾಯಾಲಯ ಅಮಾನತಿನಲ್ಲಿ ಇರಿಸಿದೆ.
ಮಧು ಬಂಗಾರಪ್ಪ ಅವರು ತಮಗೆ ವಿಧಿಸಲಾಗಿರುವ ದಂಡದ ಮೊತ್ತ ₹6.96 ಕೋಟಿ ಪೈಕಿ ಶೇ. 20ರಷ್ಟು ಹಣವನ್ನು ಒಂದು ತಿಂಗಳ ಒಳಗೆ ಠೇವಣಿ ಇಡುವಂತೆ ನಿರ್ದೇಶಿಸಿರುವ ಬೆಂಗಳೂರಿನ ಸತ್ರ ನ್ಯಾಯಾಲಯವು ವಿಶೇಷ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯ ಆದೇಶವನ್ನು ಅಮಾನತಿನಲ್ಲಿರಿಸಿದೆ.
ವಿಶೇಷ ನ್ಯಾಯಾಲಯ ವಿಧಿಸಿರುವ ಶಿಕ್ಷೆ ಅಮಾನತು ಮತ್ತು ತೀರ್ಪಿಗೆ ತಡೆ ನೀಡುವಂತೆ ಕೋರಿ ಸಿಆರ್‌ಪಿಸಿ ಸೆಕ್ಷನ್‌ 389(1) ಅಡಿ ಆಕಾಶ ಆಡಿಯೊ ವೀಡಿಯೊ ಪ್ರೈವೇಟ್‌ ಲಿಮಿಟೆಡ್‌ ಮತ್ತು ಎಸ್‌ ಬಿ ಮಧು ಚಂದ್ರ ಅಲಿಯಾಸ್‌ ಎಸ್‌ ಮಧು ಬಂಗಾರಪ್ಪ ಅಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀರಾಮ ನಾರಾಯಣ ಹೆಗ್ಡೆ ಅವರು ಮಾನ್ಯ ಮಾಡಿದ್ದಾರೆ ಎಂದು ವರದಿ ಹೇಳಿದೆ.

“ವಿಶೇಷ ನ್ಯಾಯಾಲಯದ ಆಕ್ಷೇಪಿತ ತೀರ್ಪಿನ ಕಾನೂನಿನ ಸಿಂಧುತ್ವವನ್ನು ಪರಿಶೀಲಿಸಬೇಕಿದೆ. ವಿಶೇಷ ನ್ಯಾಯಾಲಯವು ಮೇಲ್ಮನವಿದಾರರಿಗೆ ವಿಧಿಸಿರುವ ದಂಡದ ಮೊತ್ತವನ್ನು ಗಮನದಲ್ಲಿರಿಸಿಕೊಂಡು ಶೇ. 20ರಷ್ಟು ದಂಡದ ಮೊತ್ತವನ್ನು ಠೇವಣಿ ಇರಿಸಲು ಆದೇಶಿಸುವುದು ನ್ಯಾಯದಾನದ ದೃಷ್ಟಿಯಿಂದ ಸಮರ್ಥನೀಯ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
“ಶೇ. 20ರಷ್ಟು ದಂಡದ ಮೊತ್ತದ ಠೇವಣಿ ಇಡುವ ಆದೇಶಕ್ಕೆ ಒಳಪಟ್ಟು ವಿಶೇಷ ನ್ಯಾಯಾಲಯವು ಡಿಸೆಂಬರ್‌ 27ರಂದು ಮಾಡಿರುವ ಜೈಲು ಶಿಕ್ಷೆ ಆದೇಶವನ್ನು ಅಮಾನತಿನಲ್ಲಿರಿಸಲಾಗಿದೆ. ಮೇಲ್ಮನವಿದಾರರು ₹50,000 ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೊತ್ತದ ಒಂದು ಭದ್ರತೆಯನ್ನು ಒಂದು ತಿಂಗಳಲ್ಲಿ ಒದಗಿಸಬೇಕು. ಇಲ್ಲವಾದಲ್ಲಿ ಈ ಆದೇಶ ರದ್ದಾಗಲಿದೆ. ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ” ಎಂದು ನ್ಯಾಯಾಲಯವು ಆದೇಶ ಮಾಡಿದೆ ಹಾಗೂ ವಿಚಾರಣೆಯನ್ನು ಫೆಬ್ರವರಿ 29ಕ್ಕೆ ಮುಂದೂಡಿದೆ.

ಪ್ರಮುಖ ಸುದ್ದಿ :-   ಎಚ್.ಡಿ ರೇವಣ್ಣ ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲು

ಏನಿದು ಪ್ರರಕಣ..?
ಮಧು ಬಂಗಾರಪ್ಪ ನಿರ್ದೇಶಕರಾಗಿರುವ ಆಕಾಶ ಆಡಿಯೋ ಸಂಸ್ಥೆಯು ರಾಜೇಶ ಎಕ್ಸ್‌ಪೋರ್ಟ್ಸ್‌ ಲಿಮಿಟೆಡ್‌ನಿಂದ ಅಂತರ ಕಾರ್ಪೊರೇಟ್‌ ಠೇವಣಿ (ಐಸಿಡಿ) ಹಣವಾಗಿ ಆರು ಕೋಟಿ ರೂ. ಗಳನ್ನು ಪಡೆದಿತ್ತು. ಸಂಸ್ಥೆಯ ನಿರ್ದೇಶಕರಾದ ಮಧು ಬಂಗಾರಪ್ಪ ಅವರು ಈ ಸಂಬಂಧ ಐಸಿಡಿ ಸ್ವೀಕೃತಿಯನ್ನು ಖಚಿತ ಪಡಿಸಿದ್ದರು. ಅಲ್ಲದೆ, ಇದನ್ನು ಹಿಂದಿರುಗಿಸುವ ಭರವಸೆಯನ್ನು ನೀಡಿ ಕಾನೂನಾತ್ಮಕವಾಗಿ ಹಿಂಪಡೆಯಬಹುದಾದ ಈ ಸಾಲದ ಹಣಕ್ಕೆ ಪ್ರತಿಯಾಗಿ ರಾಜೇಶ್‌ ಎಕ್ಸ್‌ಪೋರ್ಟ್ಸ್‌ಗೆ ರೂ. ಆರು ಕೋಟಿ ಅರವತ್ತು ಲಕ್ಷ ಮೊತ್ತದ ಚೆಕ್‌ ಅನ್ನು 16-07-2011ರಂದು ನೀಡಿದ್ದರು.
ರಾಜೇಶ ಎಕ್ಸ್‌ಪೋರ್ಟ್ಸ್‌ ಲಿಮಿಟೆಡ್‌ ತನಗೆ ನೀಡಿದ್ದ ಚೆಕ್ ಅನ್ನು ಬ್ಯಾಂಕಿಗೆ ಹಾಕಿದ ಸಂದರ್ಭದಲ್ಲಿ ಹಣದ ಅಲಭ್ಯತೆಯಿಂದಾಗಿ 27-11-2011ರಂದು ಚೆಕ್‌ ಅಮಾನ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ರಾಜೇಶ್‌ ಎಕ್ಸ್‌ಪೋರ್ಟ್ಸ್‌ ಸಂಸ್ಥೆ ಆಕಾಶ್‌ ಆಡಿಯೋ ಹಾಗೂ ಮಧು ಬಂಗಾರಪ್ಪ ವಿರುದ್ಧ ಪ್ರಕರಣ ದಾಖಲಿಸಿತ್ತು. ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಜನವರಿಯಲ್ಲಿ ವಿಶೇಷ ನ್ಯಾಯಾಲಯವು ಮಧು ಬಂಗಾರಪ್ಪ ಅವರಿಗೆ ಜಾಮೀನು ನೀಡಿತ್ತು.
ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಲು ಕೋರಿ ಮಧು ಬಂಗಾರಪ್ಪ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಪ್ರಕರಣದ ವಿಚಾರಣೆ ಬಾಕಿ ವೇಳೆ ಮಧು ಬಂಗಾರಪ್ಪ ಅವರು ₹50 ಲಕ್ಷವನ್ನು ಪಾವತಿಸಲಾಗಿದ್ದು, ಉಳಿದ ₹6,10,00,000 ಹಣವನ್ನು ಸಲ್ಲಿಸುವುದಾಗಿ ಮುಚ್ಚಳಿಕೆ ನೀಡಿದ್ದರು. ಆದರೆ, ನಂತರ ಅದಕ್ಕೆ ಬದ್ಧವಾಗಿರಲಿಲ್ಲ.
ಹೀಗಾಗಿ ಈಗಾಗಲೇ ಪಾವತಿ ಮಾಡಿದ ₹50 ಲಕ್ಷವನ್ನು ಹೊರತುಪಡಿಸುವಂತೆ ಮಾಡಲಾದ ಕೋರಿಕೆಯನ್ನು ನಿರಾಕರಿಸಿದ ನ್ಯಾಯಾಲಯ ಒಟ್ಟು ₹6,96,70,000 ಅನ್ನು ಪರಿಹಾರವಾಗಿ ರಾಜೇಶ್‌ ಎಕ್ಸ್‌ಪೋರ್ಟ್ಸ್‌ಗೆ ಪಾವತಿಸಬೇಕು ತಪ್ಪಿದಲ್ಲಿ ಎರಡನೇ ಆರೋಪಿಯಾದ ಮಧು ಬಂಗಾರಪ್ಪ ಆರು ತಿಂಗಳ ಅವಧಿಗೆ ಸಾದಾ ಶಿಕ್ಷೆ ಅನುಭವಿಸಬೇಕು ಎಂದು ತೀರ್ಪು ನೀಡಿತ್ತು.

ಪ್ರಮುಖ ಸುದ್ದಿ :-   ಕರ್ನಾಟಕ ಬಿಜೆಪಿ ಹಂಚಿಕೊಂಡ ಅನಿಮೇಟೆಡ್ ವೀಡಿಯೊ ತೆಗೆದುಹಾಕಿ ; ಎಕ್ಸ್​ ಗೆ ಚುನಾವಣಾ ಆಯೋಗ ಸೂಚನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement