ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪ: ಕಾಂಗ್ರೆಸ್ ನಾಯಕ ಪವನ್‌ ಖೇರಾ ವಿರುದ್ಧದ ಪ್ರಕರಣ ರದ್ದತಿಗೆ ಸುಪ್ರೀಂಕೋರ್ಟ್‌ ನಕಾರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪ ಮೇಲೆ ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣಗಳನ್ನು ರದ್ದುಪಡಿಸುವಂತೆ ಕೋರಿ ಕಾಂಗ್ರೆಸ್‌ ನಾಯಕ ಪವನ್‌ ಖೇರಾ ಸಲ್ಲಿಸಿರುವ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಮಾಧ್ಯಮಗೋಷ್ಠಿಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಮಾನಿಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ನ್ಯಾಯಮೂರ್ತಿಗಳಾದ ಬಿ.ಆರ್‌. ಗವಾಯಿ ಮತ್ತು ಸಂದೀಪ್‌ ಮೆಹ್ತಾ ಅವರಿದ್ದ ಪೀಠವು, ಪವನ್‌ ಅವರ ಅರ್ಜಿಯ ವಿಚಾರಣೆ ನಡೆಸಿತು. ಉಳಿದ ಮಾನಹಾನಿ ಪ್ರಕರಣಗಳಲ್ಲೂ ಪವನ್‌ ಖೇರಾ ಕ್ಷಮೆ ಯಾಚಿಸಿರುವುದನ್ನು ಗಮನಿಸಿದ ಪೀಠವು ಅಪರಾಧವನ್ನು ಕಡೆಗಣಿಸಲು ಆಗದು ಎಂದು ಹೇಳಿತು.
ಖೇರಾ ಅವರ ವಕೀಲ ಸಲ್ಮಾನ್ ಖುರ್ಷಿದ್ ಅವರು ಪ್ರತಿಕ್ರಿಯೆ ಸಲ್ಲಿಸಲು ಸಮಯ ಕೋರಿದಾಗ, ಪೀಠವು ಪ್ರಕರಣ ಪರಿಗಣಿಸಲು ಒಲವು ಹೊಂದಿಲ್ಲ ಎಂಬುದನ್ನು ತಿಳಿಸಿತು.
ಉತ್ತರ ಪ್ರದೇಶ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಆರೋಪಪಟ್ಟಿ ಸಿದ್ಧವಾಗಿರುವುದರಿಂದ ವಿಚಾರಣೆ ಮುಂದುವರೆಯಬೇಕು ಎಂದು ಹೇಳಿದರು. ಅಲಹಾಬಾದ್ ಹೈಕೋರ್ಟ್ ಆಗಸ್ಟ್ 17ರಂದು ಖೇರಾ ಅವರ ಮನವಿಯನ್ನು ವಜಾಗೊಳಿಸಿತ್ತು.

ಪ್ರಮುಖ ಸುದ್ದಿ :-   ಚಲಿಸುವ ರೈಲಿನಲ್ಲೇ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ವ್ಯಕ್ತಿ ; ಪತ್ನಿಗೆ ಥಳಿಸಿ ಪರಾರಿ...!

ಕಳೆದ ವರ್ಷ ಫೆಬ್ರವರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಗೌತಮ್ ಅದಾನಿ- ಹಿಂಡೆನ್‌ಬರ್ಗ್ ವಿವಾದದ ಬಗ್ಗೆ ಜಂಟಿ ಸಂಸದೀಯ ತನಿಖೆ ನಡೆಸುವಂತೆ ಖೇರಾ ಅವರು ಒತ್ತಾಯಿಸಿದ್ದರು. ಆಗ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಗೆ ಉದ್ದೇಶಪೂರ್ವಕವಾಗಿ ಅವಮಾನ ಉಂಟುಮಾಡುವಂತಹ ಮಾತುಗಳನ್ನಾಡಿದ ಆರೋಪ ಕೇಳಿಬಂದಿತ್ತು.
“(ಮಾಜಿ ಪ್ರಧಾನಿ) ನರಸಿಂಹರಾವ್ ಅವರು ಜೆಪಿಸಿ (ಜಂಟಿ ಸಂಸದೀಯ ಸಮಿತಿ) ರಚಿಸುವುದಾದರೆ, ಅಟಲ್ ಬಿಹಾರಿ ವಾಜಪೇಯಿ ಅವರು ಜೆಪಿಸಿ ರಚನೆ ಮಾಡುವುದಾದರೆ, ನರೇಂದ್ರ ಗೌತಮ್‌ ದಾಸ್… ಕ್ಷಮಿಸಿ ದಾಮೋದರ ದಾಸ್ ಮೋದಿ ಅವರಿಗೆ ಜೆಪಿಸಿ ರಚಿಸಲು ಏನು ಸಮಸ್ಯೆ ” ಎಂದು ಕೇಳಿದ್ದರು.

ಪ್ರಧಾನಿ ಅವರ ತಂದೆ ದಾಮೋದರ್‌ ದಾಸ್‌ ಹೆಸರನ್ನು ಪ್ರಸ್ತಾಪಿಸುವ ಕಡೆ ಗೌತಮ ಹೆಸರನ್ನು ಉದ್ದೇಶಪೂರ್ವಕವಾಗಿ ಪ್ರಸ್ತಾಪಿಸಲಾಗಿದೆ ಎಂದು ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು.
ಪ್ರಧಾನಿಯವರ ತಂದೆಯ ಹೆಸರನ್ನು ತಪ್ಪಾಗಿ ಹೇಳಿ ಅವಹೇಳನ ಮಾಡಲಾಗಿದೆ ಎಂಬ ಆರೋಪದ ಮೇಲೆ ಉತ್ತರ ಪ್ರದೇಶ, ಅಸ್ಸಾಂನಲ್ಲಿ ವಿರುದ್ಧ ಪ್ರಕರಣ ದಾಖಲಾಗಿವೆ.
ಕಳೆದ ವರ್ಷ ಫೆಬ್ರವರಿ 23ರಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಸಭೆಗೆ ತೆರಳಲು ಛತ್ತೀಸ್‌ಗಢದ ರಾಯ್‌ಪುರಕ್ಕೆ ವಿಮಾನವೇರಿದ್ದ ಖೇರಾ ಅವರನ್ನು ದೆಹಲಿ ವಿಮಾನ ನಿಲ್ದಾಣದಿಂದ ಬಂಧಿಸಿ ಪೊಲೀಸರು ಕರೆದೊಯ್ದಿದ್ದರು. ಅಸ್ಸಾಂನಲ್ಲಿಯೂ ಅವರ ವಿರುದ್ಧ ದಾಖಲಾದ ಎಫ್ಐಆರ್ ಆಧರಿಸಿ ಅಲ್ಲಿನ ಪೊಲೀಸರು ಅವರನ್ನು ವಿಮಾನದಿಂದ ಕೆಳಗಿಳಿಸಿ ವಶಕ್ಕೆ ಪಡೆದಿದ್ದರು. ಬಳಿಕ, ಸುಪ್ರೀಂ ಕೋರ್ಟ್‌ನಿಂದ ದೊರೆತ ಮಧ್ಯಂತರ ಜಾಮೀನಿನ ಆಧಾರದ ಮೇಲೆ ಬಿಡುಗಡೆಯಾಗಿದ್ದರು.
ತಮ್ಮ ವಿರುದ್ಧದ ಪ್ರಕರಣಗಳನ್ನು ರದ್ದುಪಡಿಸಲು ಅಲಹಾಬಾದ್‌ ಹೈಕೋರ್ಟ್‌ ನಿರಾಕರಿಸಿದ್ದರಿಂದ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : ಕಾಂಗ್ರೆಸ್​​​ಗೆ ಮತ್ತೊಂದು ಶಾಕ್ ; ಸ್ಪರ್ಧಿಸಲು ನಿರಾಕರಿಸಿ ಟಿಕೆಟ್‌ ವಾಪಸ್‌ ಮಾಡಿದ ಕಾಂಗ್ರೆಸ್​​ ಅಭ್ಯರ್ಥಿ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement