ಮಗಳು ಮೃತಪಟ್ಟರೂ ಆಕೆಯ ಕಾನೂನಾತ್ಮಕ ಉತ್ತರಾಧಿಕಾರಿಗಳಿಗೂ ಆಸ್ತಿಯಲ್ಲಿ ಸಮಾನ ಹಕ್ಕಿದೆ : ಹೈಕೋರ್ಟ್

ಬೆಂಗಳೂರು : ಹಿಂದೂ ಉತ್ತರಾಧಿಕಾರ ಕಾಯಿದೆಗೆ ತಿದ್ದುಪಡಿ ಮಾಡುವ ಮುನ್ನ ಮಗಳು ಮೃತಪಟ್ಟಿದ್ದಾರೆಂಬ ಕಾರಣಕ್ಕೆ ಮಗಳ ಉತ್ತರಾಧಿಕಾರಿಗಳಿಗೆ ಆಸ್ತಿ ಹಕ್ಕು ನಿರಾಕರಿಸಲು ಸಾಧ್ಯವಿಲ್ಲ. ಪುತ್ರಿ ಮೃತಪಟ್ಟಿದ್ದರೂ ಆಕೆಯ ಕಾನೂನಾತ್ಮಕ ವಾರಸುದಾರರಿಗೆ ಆಸ್ತಿಯಲ್ಲಿ ಸಮಾನ ಪಾಲು ಪಡೆಯುವ ಹಕ್ಕಿದೆ ಎಂದು ಕರ್ನಾಟಕ ಹೈಕೋರ್ಟ್‌ ಧಾರವಾಡ ಪೀಠ ಇತ್ತೀಚಿಗೆ ತೀರ್ಪು ನೀಡಿದೆ.
”ಹೆಣ್ಣು ಮಕ್ಕಳಿಗೆ ಜಂಟಿ ಉತ್ತರಾಧಿಕಾರದ (ಕೊಪಾರ್ಸೆನರಿ) ಹಕ್ಕುಗಳನ್ನು ನೀಡುವ ಉದ್ದೇಶದಿಂದ 2005ರ ಸೆಪ್ಟೆಂಬರ್‌ 9ರಂದು ಕಾಯಿದೆಗೆ ತಿದ್ದುಪಡಿ ಮಾಡಲಾಯಿತು. ಆದರೆ ಆ ದಿನಕ್ಕೂ ಮೊದಲೇ ಮಹಿಳೆ ಮೃತಪಟ್ಟಿದ್ದಾರೆಂದು ಹೇಳಿ ಪೂರ್ವಜರ ಆಸ್ತಿ ಹಕ್ಕುಗಳನ್ನು ಆಕೆಯ ಕಾನೂನಾತ್ಮಕ ವಾರಸುದಾರರಿಂದ ಕಸಿದುಕೊಳ್ಳುವಂತಿಲ್ಲ ಎಂದು ನ್ಯಾ. ಸಚಿನ್‌ ಶಂಕರ್‌ ಮಗದುಮ್‌ ಅವರಿದ್ದ ಏಕಸದಸ್ಯ ಪೀಠ ಹೇಳಿದೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.
ವರದಿ ಪ್ರಕಾರ, ಮೃತ ಹೆಣ್ಣು ಮಕ್ಕಳ ಕಾನೂನು ಉತ್ತರಾಧಿಕಾರಿಗಳು ಕೂಡ ಆಸ್ತಿಯಲ್ಲಿಸಮಾನ ಪಾಲು ಪಡೆಯಬಹುದು ಎಂದು ಪೀಠ ಹೇಳಿದೆ.

ಗದಗ ಜಿಲ್ಲೆಯ ನರಗುಂದ ತಾಲೂಕಿನ ನಿವಾಸಿ ಚನ್ನಬಸಪ್ಪ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವಾಗ ಹೈಕೋರ್ಟ್ ಪೀಠವು, ವಿನೀತಾ ಶರ್ಮಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನ ವಿಸ್ತೃತ ಪೀಠ 2020ರಲ್ಲಿ ಸ್ಪಷ್ಟ ತೀರ್ಪು ನೀಡಿದೆ ಎಂದು ಹೇಳಿದೆ.
2005ರ ಹಿಂದೂ ಉತ್ತರಾಧಿಕಾರ ಕಾಯಿದೆಗೆ ಮಾಡಲಾದ ತಿದ್ದುಪಡಿಯಂತೆ ಹೆಣ್ಣು ಮಕ್ಕಳು ಗಂಡು ಮಕ್ಕಳಂತೆಯೇ ‘ಜಂಟಿ ಉತ್ತರಾಧಿಕಾರದ’ ಹಕ್ಕುಗಳನ್ನು ಪಡೆಯುತ್ತಾರೆ ಎಂದು ನ್ಯಾಯಾಲಯ ತಿಳಿಸಿದೆ.

ಪ್ರಮುಖ ಸುದ್ದಿ :-   ಇನ್ಫೋಸಿಸ್‌ಗೆ ನೂತನ ಸಾರಥಿ: ಸಲೀಲ್ ಪಾರೇಖ್ ಸ್ಥಾನಕ್ಕೆ ಆಶಿಶ್ ಕುಮಾರ ದಾಸ್ ಸಿಇಒ ಆಗಿ ನೇಮಕ

“ವ್ಯಕ್ತಿ ಜನ್ಮತಃ ಹಕ್ಕು ಪಡೆದಿರುತ್ತಾನೆಯೇ ವಿನಃ ಉತ್ತರಾಧಿಕಾರದಿಂದಲ್ಲ. ಅದರಂತೆ ಮಗಳು ಜೀವಂತ ಇರಲಿ ಅಥವಾ ಇಲ್ಲದಿರಲಿ ಅವಳು ಆಸ್ತಿಯಲ್ಲಿ ಹಕ್ಕು ಪಡೆದಿರುತ್ತಾಳೆ. ಕಾಯಿದೆಗೆ 2005ರಲ್ಲಿ ತಿದ್ದುಪಡಿ ತರುವ ಮೊದಲೇ ಆಕೆ ನಿಧನಳಾಗಿದ್ದಾಳೆಂದು ನೆಪ ಹೇಳಿ ಆಕೆಯ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ಆಸ್ತಿ ಹಕ್ಕನ್ನು ನಿರಾಕರಿಸಲಾಗದು ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ” ಎಂಬುದಾಗಿ ಪೀಠ ಹೇಳಿದೆ.
ತಿದ್ದುಪಡಿ ಕಾಯಿದೆ ಲಿಂಗ ಸಮಾನತೆ ನೀಡಲಿದೆ. ಹಾಗೂ ತಿದ್ದುಪಡಿ ನಿಯಮಗಳು ಪೂರ್ವಾನ್ವಯವಾಗುತ್ತವೆ ಎಂದು ಸುಪ್ರೀಂಕೋರ್ಟ್‌ ಸ್ಪಷ್ಟವಾಗಿ ಹೇಳಿರುವುದಾಗಿ ಹೈಕೋರ್ಟ್‌ ತಿಳಿಸಿದೆ.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement