ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸಮಿತಿ ರಚನೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಜಿಲ್ಲಾಧ್ಯಕ್ಷರು, ರಾಜ್ಯ ಪದಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರುಗಳ ಸಭೆಯಲ್ಲಿ ಅವರು ಈ ಘೋಷಣೆ ಘೋಷಣೆ ಮಾಡಿದ್ದಾರೆ. ರಾಜ್ಯ, ಜಿಲ್ಲಾ, ತಾಲೂಕು ಹಾಗೂ ವಿಧಾನಸಭೆ ಕ್ಷೇತ್ರ ಮಟ್ಟದಲ್ಲಿ ಸಮಿತಿ ರಚಿಸಲಾಗುವುದು ಎಂದು ಹೇಳಿದ್ದಾರೆ.
ರಾಜ್ಯಮಟ್ಟದ ಸಮಿತಿ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನ ಹಾಗೂ ಐದು ಮಂದಿ ಉಪಾಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಲಾಗುತ್ತದೆ. ಉಳಿದ ಸಮಿತಿ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರಿಗೆ ಗೌರವ ಧನ ನೀಡಲು ತೀರ್ಮಾನ ಮಾಡಲಾಗಿದೆ. ಇದಕ್ಕೆ ಒಟ್ಟು ವಾರ್ಷಿಕ 16 ಕೋಟಿ ರೂ.ಗಳಷ್ಟು ವೆಚ್ಚ ಆಗಲಿದೆ. ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಮಾಡುವ ಕುರಿತು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜ್ಯ ಮಟ್ಟದ ಸಮಿತಿಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ 31 ಸದಸ್ಯರಿರುತ್ತಾರೆ. ಅವರು ಯೋಜನೆಯ ಅನುಷ್ಠಾನದ ಮೇಲ್ವಿಚಾರಣೆ ಮಾಡುತ್ತಾರೆ. ಜಿಲ್ಲಾ ಮಟ್ಟದ ಸಮಿತಿಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ 21 ಸದಸ್ಯರು ಇರುತ್ತಾರೆ, ಅಧ್ಯಕ್ಷರು 50 ಸಾವಿರ ಗೌರವಧನ ಪಡೆಯಲಿದ್ದಾರೆ ಎಂದರು.
ವಿಧಾನಸಭೆ ಕ್ಷೇತ್ರ ಮಟ್ಟದ ಸಮಿತಿಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ 11 ಮಂದಿ ಸದಸ್ಯರು ಇರುತ್ತಾರೆ. ಕ್ಷೇತ್ರ ಮಟ್ಟದ ಅಧ್ಯಕ್ಷರಿಗೆ 20 ಸಾವಿರ ಅಥವಾ 25 ಸಾವಿರ ಗೌರವಧನ ನೀಡಲು ಯೋಚಿಸಿದ್ದೇವೆ. ಸದಸ್ಯರಿಗೆ ಭತ್ಯೆ ಮಾತ್ರ ಸಿಗುತ್ತದೆ. ಒಂದು ವಾರದೊಳಗೆ ಈ ಸಮಿತಿಗಳನ್ನು ರಚಿಸಲಾಗುತ್ತದೆ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮಾತನಾಡಿ, “ಕಾಂಗ್ರೆಸ್ ಗ್ಯಾರಂಟಿಯನ್ನು ತಳಮಟ್ಟದಲ್ಲಿ ಜನರಿಗೆ ತಲುಪಿಸಲು ರಾಜ್ಯಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ರಚನೆಗೆ ತೀರ್ಮಾನ ಮಾಡಲಾಗಿದೆ. ಕ್ಷೇತ್ರ ಹಾಗೂ ಜಿಲ್ಲಾ ಮಟ್ಟದಲ್ಲಿ ಈ ಸಮಿತಿ ಕಾರ್ಯನಿರ್ವಹಿಸಲಿದೆ. ಪಾರದರ್ಶಕವಾಗಿ ಕೆಲಸ ಮಾಡಲಿದೆ. ಏನಾದರೂ ಸಮಸ್ಯೆ ಇದ್ದರೆ ಅದನ್ನು ಬಗೆಹರಿಸಲು ಈ ಸಮಿತಿ ಕ್ರಮ ಕೈಗೊಳ್ಳಲಿದೆ ಎಂದರು.
ಬೇರೆ ಬೇರೆ ಇಲಾಖಾವಾರು ಸಮಿತಿ ರಚನೆಗೂ ನಿರ್ಧಾರ ಮಾಡಲಾಗಿದೆ. ಉದಾಹರಣೆಗೆ ಆಸ್ಪತ್ರೆ ಸಮಿತಿ ರಚಿಸುವ ಮೂಲಕ ಆಸ್ಪತ್ರೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲಾಗುತ್ತದೆ. ಜನರ ಸರ್ಕಾರ ಮಾಡುವ ನಿಟ್ಟಿನಲ್ಲಿ ಈ ಸಮಿತಿ ಕಾರ್ಯನಿರ್ವಹಿಸಲಿದೆ’’ ಎಂದು ಸುರ್ಜೇವಾಲ ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ