ಕಾಂಗ್ರೆಸ್ಸಿನವರಿಗೆ ಇಲ್ಲದ ಸಭ್ಯತೆ ಬಿಜೆಪಿಯವರಿಗೆ ಮಾತ್ರ ಯಾಕೆ..? ಸಭ್ಯತೆ ವಿಷಯದಲ್ಲಿ ಸಿದ್ದರಾಮಯ್ಯ ಬಹಿರಂಗ ಚರ್ಚೆಗೆ ಬರಲಿ: ಅನಂತಕುಮಾರ ಹೆಗಡೆ

ಶಿರಸಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೇರೆಯವರ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದು ಸರಿ ಎಂದಾದರೆ ನಾನು ಏಕವಚನದಲ್ಲಿ ಮಾತನಾಡಿದ್ದು ಹೇಗೆ ತಪ್ಪಾಗುತ್ತದೆ ಎಂದು ಸಂಸದ ಅನಂತಕುಮಾರ ಹೆಗಡೆ ಪ್ರಶ್ನಿಸಿದ್ದಾರೆ.
ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಹಾಗೂ ಸಿದ್ದರಾಮಯ್ಯ ಅವರಿಗೆ ಇಲ್ಲದ ಸಭ್ಯತೆ ಬಿಜೆಪಿಯವರಿಗೆ ಮಾತ್ರ ಯಾಕೆ ಎಂದು ಕೇಳಿದ್ದಾರೆ.ಸಂಸ್ಕೃತಿ ಹಾಗೂ ಸಭ್ಯತೆ ಬಗ್ಗೆ ಪಾಠ ಮಾಡುವ ಸಿದ್ದರಾಮಯ್ಯ ಅವರು ಈ ವಿಷಯದಲ್ಲಿ ನನ್ನೊಂದಿಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲೆಸೆದಿದ್ದಾರೆ.
ಸಭ್ಯತೆ ಹಾಗೂ ಸಂಸ್ಕೃತಿ ಬಗ್ಗೆ ಮಾತನಾಡುವ ಕಾಂಗ್ರೆಸ್‌ ಹಾಗೂ ಸಿದ್ದರಾಮಯ್ಯನವರು ಸಭ್ಯತೆ ಹಾಗೂ ಸಂಸ್ಕೃತಿ ಬಗ್ಗೆ ಸಭೆಯಲ್ಲೋ ಇನ್ನೆಲ್ಲೋ ಮಾತನಾಡುವುದಲ್ಲ. ನನ್ನೊಂದಿಗೆ ಬಹಿರಂಗ ಚರ್ಚೆಗೆ ಬರಲಿ, ಲೈವ್‌ ಚರ್ಚೆಗೆ ಬರಲಿ. ಅಲ್ಲಿ  ಉತ್ತರಿಸುತ್ತೇನೆ ಎಂದು ಹೇಳಿದರು

ಸಿದ್ದರಾಮಯ್ಯ ಅವರಿಗೆ ನಾನು ಮಾತನಾಡಿದ್ದು ನನ್ನ ವೈಯಕ್ತಿಕ ಹೇಳಿಕೆಯಾಗಿದೆ. ಅದು ಪಕ್ಷ ಹೇಳಿಕೆಯಲ್ಲ, ಈ ವಿಷಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ ಸರಿ ಇದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಯಡಿಯೂರಪ್ಪ, ದೇವಸ್ಥಾನಗಳು ಮತ್ತು ಹಿಂದೂತ್ವದ ಬಗ್ಗೆ ಅಸಭ್ಯವಾಗಿ ಮಾತನಾಡಿರುವುದು ಯಾರು..? ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿಯವರ ಬಗ್ಗೆ ಎಲ್ಲೆ ಮೀರಿ ಮಾತಾಡುವಾಗ ಅವರಿಗೆ ಸಭ್ಯತೆ ಮತ್ತು ಸಂಸ್ಕೃತಿಯ ಗೊತ್ತಿರಲಿಲ್ಲವೇ..? ಎಂದು ಪ್ರಶ್ನಿಸಿದರು.

ಪ್ರಮುಖ ಸುದ್ದಿ :-   ಶಾಸಕ ಸ್ಥಾನದಿಂದ ಅನರ್ಹಗೊಂಡ ಜನಾರ್ದನ ರೆಡ್ಡಿ

ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಕಾಂಗ್ರೆಸ್‌ನವರು ಹೇಗೆಲ್ಲ ಮಾತನಾಡಿದ್ದಾರೆ. ಸಲ್ಮಾನ್‌ ಖುರ್ಷಿದ್‌ ಮೋದಿಯವರನ್ನು ಮಂಗ, ಕಪ್ಪೆ, ನಪುಂಸಕ ಎಂದೆಲ್ಲ ಕರೆದರು. ಮೋದಿಯವರನ್ನು ಸಿದ್ದರಾಮಯ್ಯ ಮಾಸ್‌ ಮರ್ಡರರ್‌ ಎಂದು ಕರೆದರು. ದಿಗ್ವಿಜಯ ಸಿಂಗ್‌ ರಾವಣ ಎಂದು ಕರೆದರು. ಜೈರಾಮ ರಮೇಶ ಭಸ್ಮಾಸುರ ಎಂದು ಕರೆದರು, ಮಣಿಶಂಕರ ಅಯ್ಯರ್‌ ವಿಷದ ಹಾವು ಎಂದು ಕರೆದರು. ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಮೋದಿಗೆ ಏಕವಚನದಲ್ಲಿ ಏನೆಲ್ಲ ಮಾತನಾಡಿದರು. ಇದಕ್ಕೆಲ್ಲ ಮಾಧ್ಯಮದ ದಾಖಲೆಗಳಿವೆ. ನಾವು ಇನ್ನೂ ಏನೇನು ಹೇಳಿಸಿಕೊಳ್ಳಬೇಕು..? ಅವರಿಗೊಂದು ನ್ಯಾಯ, ನಮಗೊಂದು ನ್ಯಾಯವಾ..? ಎಂದು ಪ್ರಶ್ನಿಸಿದರು.
ಯಾರಿಗೆ ಯಾವ ಭಾಷೆಯಲ್ಲಿ ಹೇಗೆ ಮಾತನಾಡಬೇಕೋ ನಾನು ಹಾಗೆ ಮಾತನಾಡಿದ್ದೇನೆ. ಯಾರು ನನ್ನನ್ನು ಒಪ್ಪಿಕೊಳ್ಳುತ್ತಾರೋ ಬಿಡುತ್ತಾರೋ ನನಗೆ ಗೊತ್ತಿಲ್ಲ. ಹಿಂದೂ ಸಮಾಜ ನನ್ನನ್ನು ಒಪ್ಪಿದೆ ಎಂದು ಹೇಳಿದರು.
.

 

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement