ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಅವರ ಮಾಜಿ ವ್ಯವಹಾರ ಪಾಲುದಾರರಾದ ಮಿಹಿರ್ ದಿವಾಕರ್ ಮತ್ತು ದಿವಾಕರ ಪತ್ನಿ ಸೌಮ್ಯ ದಾಸ್ ಅವರು ದೆಹಲಿ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಈ ಪ್ರಕರಣವನ್ನು ಜನವರಿ 18ರಂದು ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರ ಪೀಠ ವಿಚಾರಣೆ ನಡೆಸಲಿದೆ. 2017 ರ ಒಪ್ಪಂದದ ಉಲ್ಲಂಘನೆಗೆ ಸಂಬಂಧಿಸಿದಂತೆ ಧೋನಿ ಮತ್ತು ಅವರ ಪರವಾಗಿ ಕಾರ್ಯನಿರ್ವಹಿಸುವವರು ತಮ್ಮ ವಿರುದ್ಧ ಮಾನಹಾನಿ ಹೇಳಿಕೆಗಳನ್ನು ನೀಡದಂತೆ ತಡೆ ನೀಡಬೇಕೆಂದು ದಿವಾಕರ ಮತ್ತು ಸೌಮ್ಯ ಕೋರಿದ್ದಾರೆ.
ಭಾರತ ಮತ್ತು ವಿವಿಧ ದೇಶಗಳಲ್ಲಿ ಕ್ರಿಕೆಟ್ ಅಕಾಡೆಮಿಗಳನ್ನು ಸ್ಥಾಪಿಸಲು ಧೋನಿ ಅವರು ಮಿಹಿರ್ ಮತ್ತು ಸೌಮ್ಯ ಒಡೆತನದ ಆರ್ಕಾ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಒಪ್ಪಂದ ಪಾಲಿಸದೆ ತನಗೆ ಸುಮಾರು 15 ಕೋಟಿ ರೂ.ಗಳನ್ನು ವಂಚಿಸಿದ್ದಾರೆ ಎಂದು ಧೋನಿ ಮತ್ತು ಅವರ ಪರವಾಗಿ ಕಾರ್ಯನಿರ್ವಹಿಸುವವರು ಮಿಹಿರ್ ಮತ್ತು ಸೌಮ್ಯ ವಿರುದ್ಧ ಆರೋಪ ಮಾಡಿದ್ದರು. ಈ ಆರೋಪ ಮಾನಹಾನಿಕರವಾಗಿದೆ. ನ್ಯಾಯಾಲಯವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡುವ ಮೊದಲೇ ಧೋನಿ ಪರ ವಕೀಲ ದಯಾನಂದ ಶರ್ಮಾ ಅವರು ಜನವರಿ 6ರಂದು ಪತ್ರಿಕಾಗೋಷ್ಠಿ ನಡೆಸಿ ಮಾನನಷ್ಟ ಹಾನಿಯಾಗುವಂತಹ ಆರೋಪಗಳನ್ನು ಮಾಡಿದ್ದಾರೆ ಎಂದು ಮೊಕದ್ದಮೆಯಲ್ಲಿ ಆರೋಪಿಸಲಾಗಿದೆ.
ಈ ಆರೋಪಗಳು ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗಿದ್ದು, ಇದು ತಮ್ಮ ವರ್ಚಸ್ಸಿಗೆ ಕಳಂಕ ತಂದಿದೆ. ಆದ್ದರಿಂದ, ಧೋನಿ ಮತ್ತು ಅವರ ಪರವಾಗಿ ಕಾರ್ಯನಿರ್ವಹಿಸುವವರು ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ಆರೋಪಗಳನ್ನು ಮಾಡದಂತೆ ತಡೆ ನೀಡುವಂತೆ ಮಿಹಿರ್ ಮತ್ತು ಸೌಮ್ಯ ಕೋರಿದ್ದಾರೆ.
ತಮ್ಮ ವಿರುದ್ಧದ ಅವಹೇಳನಕರ ಲೇಖನ/ ಹೇಳಿಕೆಗಳನ್ನು ತೆಗೆಯುವಂತೆ ಎಕ್ಸ್, ಗೂಗಲ್, ಯೂಟ್ಯೂಬ್ ಮೆಟಾ ಹಾಗೂ ವಿವಿಧ ಸುದ್ದಿ ವೇದಿಕೆಗಳಿಗೆ ನಿರ್ದೇಶನ ನೀಡುವಂತೆಯೂ ಅವರು ಕೋರಿದ್ದಾರೆ.
‘ಎಂಎಸ್ ಧೋನಿ ಕ್ರಿಕೆಟ್ ಅಕಾಡೆಮಿ’, ‘ಎಂಎಸ್ ಧೋನಿ ಸ್ಪೋರ್ಟ್ಸ್ ಅಕಾಡೆಮಿ’ ಅಥವಾ ‘ಎಂಎಸ್ ಧೋನಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್’ ಹೆಸರಿನಲ್ಲಿ ಜಾಗತಿಕವಾಗಿ ಕ್ರಿಕೆಟ್ ಅಕಾಡೆಮಿ ಮತ್ತು ಕ್ರೀಡಾ ಸಂಕೀರ್ಣಗಳನ್ನು ತೆರೆಯಲು 2017ರಲ್ಲಿ ಮಾಡಿಕೊಂಡ ಒಪ್ಪಂದ ಉಲ್ಲಂಘಿಸಿದ ಆರೋಪದ ಮೇಲೆ ಧೋನಿ ಈ ಹಿಂದೆ ಮಿಹಿರ್ ಮತ್ತು ಸೌಮ್ಯ ವಿರುದ್ಧ ರಾಂಚಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ