ಉಡುಪಿ: ನಾಲ್ಕನೇ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡಿದ ಪುತ್ತಿಗೆ ಶ್ರೀಗಳು

ಉಡುಪಿ: ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಗುರುವಾರ ಬೆಳಗಿನ ಜಾವದ ಶುಭ ಮುಹೂರ್ತದಲ್ಲಿ ಸರ್ವಜ್ಞ ಪೀಠಾರೋಹಣ ಮಾಡುವ ಮೂಲಕ ಚತುರ್ಥ ಪರ್ಯಾಯ ಆರಂಭಿಸಿದ್ದಾರೆ.
ಪರ್ಯಾಯ ಪೂಜಾಧಿಕಾರ ಹಸ್ತಾಂತರ ಮಾಡಬೇಕಿದ್ದ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರ ಅನುಪಸ್ಥಿತಿಯಲ್ಲಿ ಅದಮಾರು ಮಠದ ಹಿರಿಯ ಯತಿಗಳಾದ ವಿಶ್ವಪ್ರಿಯ ತೀರ್ಥರು ಸರ್ವಜ್ಞ ಪೀಠಾರೋಹಣದ ವಿಧಿ ವಿಧಾನಗಳನ್ನು ನೆರವೇರಿಸಿದರು.
ಪರ್ಯಾಯ ಮೆರವಣಿಗೆಯ ಮೂಲಕ ಕೃಷ್ಣಮಠ ಪ್ರವೇಶಿಸಿದ ಪುತ್ತಿಗೆ ಶ್ರೀಗಳಿಗೆ ಸ್ವಾಗತ ಕೋರಿ ಮಧ್ವಾಚಾರ್ಯರಿಂದ ಕೊಡಮಾಡಿದ ಅಕ್ಷಯ ಪಾತ್ರೆ ಹಾಗೂ ಬೆಳ್ಳಿಯ ಸಟ್ಟುಗ ನೀಡಿದ ನಂತರ ಪುತ್ತಿಗೆ ಶ್ರೀಗಳನ್ನು ಸರ್ವಜ್ಞ ಪೀಠದಲ್ಲಿ ಕೂಡ್ರಿಸಿ ಪರ್ಯಾಯಕ್ಕೆ ಶುಭ ಹಾರೈಸಿ ಆಶೀರ್ವದಿಸಿದರು. ಪುತ್ತಿಗೆ ಮಠದ ಕಿರಿಯ ಯತಿ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಜತೆಗಿದ್ದರು.

ಪರ್ಯಾಯ ಮೆರವಣಿಗೆ:
ಸರ್ವಜ್ಞ ಪೀಠಾರೋಹಣಕ್ಕೂ ಮುನ್ನ ನಗರದಲ್ಲಿ ಭವ್ಯ ಪರ್ಯಾಯ ಮೆರವಣಿಗೆ ನಡೆಯಿತು. ತಡರಾತ್ರಿ 1:30ಕ್ಕೆ ಕಾಪುವಿನ ದಂಡ ತೀರ್ಥದಲ್ಲಿ ಪವಿತ್ರ ಸ್ಥಾನ ಪೂರೈಸಿ ಉಡುಪಿಯ ಕಿನ್ನಿಮೂಲ್ಕಿ ಸ್ವಾಗತ ಗೋಪುರ ಪ್ರವೇಶಿಸಿದ ಪುತ್ತಿಗೆ ಮಠದ ಉಭಯ ಯತಿಗಳಿಗೆ ಭಕ್ತರು ಅದ್ಧೂರಿ ಸ್ವಾಗತ ಕೋರಿದರು.
ಸಂಪ್ರದಾಯದಂತೆ ನಗರದ ಜೋಡುಕಟ್ಟೆಯ ಮಂದಿರಕ್ಕೆ ಬಂದ ಯತಿಗಳು ದೇವರಿಗೆ ಪೂಜೆ ಸಲ್ಲಿಸಿ ಅಲಂಕೃತ ಪಲ್ಲಕ್ಕಿಯಲ್ಲಿ ಆಸೀನರಾದ ನಂತರ ಪರ್ಯಾಯ ಮೆರವಣಿಗೆಗೆ ಚಾಲನೆ ಸಿಕ್ಕಿತು. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಸಹಿತ ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಮೆರವಣಿಗೆಯ ಕೊನೆಯಲ್ಲಿ ಪುತ್ತಿಗೆ ಮಠದ ಕಿರಿಯ ಯತಿ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಹಿರಿಯ ಯತಿ ಸುಗುಣೇಂದ್ರ ತೀರ್ಥ ಸ್ವಾಮೀಜಿ ಸಾಗಿದರು. ಯತಿಗಳ ಮುಂದೆ ಚಿನ್ನದ ಪಲ್ಲಕ್ಕಿಯಲ್ಲಿ ಮಠದ ಆರಾಧ್ಯದೈವ ವಿಠಲನ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು.

ಪ್ರಮುಖ ಸುದ್ದಿ :-   ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ತಂದೆ- ಮಗಳು ಸಾವು

ಮೆರವಣಿಗೆ ರಥಬೀದಿ ತಲುಪುತ್ತಿದ್ದಂತೆ ಉಭಯ ಯತಿಗಳು ಮೇನೆಯಿಂದಿಳಿದು ಕನಕನ ಕಿಂಡಿಯಲ್ಲಿ ಕೃಷ್ಣನ ದರ್ಶನ ಮಾಡಿದರು. ನಂತರ ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇವಾಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಕೃಷ್ಣಮಠ ಪ್ರವೇಶಿಸಿ ಗರ್ಭಗುಡಿಯ ಬಳಿ ನವರತ್ನ ಕಿಂಡಿಯಲ್ಲಿ ಕೃಷ್ಣನ ದರ್ಶನ ಮಾಡಿ ಸರ್ವಜ್ಞ ಪೀಠಾರೋಹಣ ಮಾಡಿ ಪರ್ಯಾಯ ವಿಧಿವಿಧಾನಗಳನ್ನು ಪೂರೈಸಿದರು.

ಏಳು ಮಠಾಧೀಶರು ಗೈರು..
ಪರ್ಯಾಯದ ಅಂಗವಾಗಿ ನಡೆದ ಪುತ್ತಿಗೆ ಮಠದ ಶ್ರೀಗಳ ಶೋಭಾಯಾತ್ರೆಯಲ್ಲಿ ಸಪ್ತ ಮಠಗಳ ಮಠಾಧೀಶರು ಪಾಲ್ಗೊಂಡಿರಲಿಲ್ಲ.
ಕಾಪು ಸಮೀಪದ ದಂಡತೀರ್ಥದಲ್ಲಿ ಪವಿತ್ರ ಸ್ನಾನ ಮಾಡಿ ಜೋಡುಕಟ್ಟೆಗೆ ಆಗಮಿಸಿ ಅಲ್ಲಿಂದ ಕೃಷ್ಣ ಮಠದವರೆಗೆ ನಡೆಯುವ ಶೋಭಾಯಾತ್ರೆಯಲ್ಲಿ ಉಡುಪಿಯ ಕೃಷ್ಣಮಠಕ್ಕೆ ಸಂಬಂಧಿಸಿದ ಅಷ್ಟ ಮಠಗಳ ಎಲ್ಲ ಮಠಾಧೀಶರು ಪಾಲ್ಗೊಳ್ಳುವುದು ನಡೆದುಕೊಂಡು ಬಂದ ಪದ್ಧತಿ. ಆದರೆ ಆದರೆ, ಯಾತ್ರೆಯಲ್ಲಿ ಪುತ್ತಿಗೆ ಶ್ರೀ ಮತ್ತು ಅವರ ಕಿರಿಯ ಶ್ರೀಗಳು ಮಾತ್ರ ಇದ್ದರು.

.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement