ಬಿಲ್ಕಿಸ್‌ ಬಾನು ಪ್ರಕರಣ: ಅಪರಾಧಿಗಳು ಜನವರಿ 21ರೊಳಗೆ ಶರಣಾಗಲು ಸುಪ್ರೀಂ ಕೋರ್ಟ್‌ ಆದೇಶ

ನವದೆಹಲಿ: ಜೈಲು ಅಧಿಕಾರಿಗಳ ಮುಂದೆ ಶರಣಾಗಲು ಹೆಚ್ಚುವರಿ ಕಾಲಾವಕಾಶ ಕೋರಿ ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದ ಎಲ್ಲಾ ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ನ್ಯಾಯಾಲಯವು ನಿಗದಿಪಡಿಸಿದ ಮೂಲ ಗಡುವಿನ ಪ್ರಕಾರ ಜನವರಿ 21 ರೊಳಗೆ ಎಲ್ಲಾ 11 ಅಪರಾಧಿಗಳು ಜೈಲು ಅಧಿಕಾರಿಗಳ ಮುಂದೆ ಶರಣಾಗುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಶರಣಾಗಲು ಸಮಯ ವಿಸ್ತರಣೆ ಕೋರಿ ಅಪರಾಧಿಗಳು ಉಲ್ಲೇಖಿಸಿರುವ ಕಾರಣಗಳಲ್ಲಿ ಅರ್ಹತೆಯ ಕೊರತೆಗಳಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದು ಲೈವ್ ಲಾ ವರದಿ ಮಾಡಿದೆ.
“ಶರಣಾಗತಿ ಆಗಿ ಜೈಲಿಗೆ ಹಿಂತಿರುಗಲು ಅರ್ಜಿದಾರರು ಉಲ್ಲೇಖಿಸಿರುವ ಕಾರಣಗಳು ಯಾವುದೇ ಅರ್ಹತೆಯನ್ನು ಹೊಂದಿಲ್ಲ, ಆ ಕಾರಣಗಳು ನಮ್ಮ ನಿರ್ದೇಶನಗಳನ್ನು ಅನುಸರಿಸುವುದನ್ನು ಯಾವುದೇ ರೀತಿಯಲ್ಲಿ ತಡೆಯುವುದಿಲ್ಲ” ಎಂದು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರ ಪೀಠ ಹೇಳಿದೆ.

ಜೈಲು ಅಧಿಕಾರಿಗಳ ಮುಂದೆ ಶರಣಾಗಲು ಸಮಯವನ್ನು ವಿಸ್ತರಿಸುವಂತೆ ಕೋರಿ ಹಲವಾರು ಅಪರಾಧಿಗಳು ವಿವಿಧ ಕಾರಣಗಳನ್ನು ಉಲ್ಲೇಖಿಸಿ ಅರ್ಜಿಗಳನ್ನು ಸಲ್ಲಿಸಿದ ನಂತರ ನ್ಯಾಯಾಲಯದ ಆದೇಶ ಬಂದಿದೆ. ಅಪರಾಧಿಗಳು ನೀಡಿದ ಕಾರಣಗಳಲ್ಲಿ ಮನೆಯ ಜವಾಬ್ದಾರಿಗಳು, ಮಗನ ಮದುವೆ ಮತ್ತು ಚಳಿಗಾಲದ ಕೊಯ್ಲು ಇವೇ ಮೊದಲಾವುಗಳು ಸೇರಿವೆ.
ಅಪರಾಧಿಗಳು, ಭಾನುವಾರ ಶರಣಾದ ನಂತರ, ಸುಪ್ರೀಂ ಕೋರ್ಟ್‌ಗೆ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸುವ ಆಯ್ಕೆಯನ್ನು ಹೊಂದಿದ್ದಾರೆ. ರಾಜ್ಯದಲ್ಲಿ ವಿಚಾರಣೆ ನಡೆದಿರುವುದರಿಂದ ಅವರು ಮಹಾರಾಷ್ಟ್ರ ಸರ್ಕಾರದ ಮುಂದೆ ಹೊಸ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬಹುದು.

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ಮುಸ್ಲಿಂ ಮತಗಳು ಬೇಕು, ಆದರೆ ಟಿಕೆಟ್‌ ಕೊಡಲ್ಲ : ಕಾಂಗ್ರೆಸ್‌ ಬಗ್ಗೆ ನಸೀಂ ಖಾನ್ ತೀವ್ರ ಅಸಮಾಧಾನ, ಹುದ್ದೆಗೆ ರಾಜೀನಾಮೆ

ಬಿಲ್ಕಿಸ್ ಬಾನೋ ಪ್ರಕರಣ: ಸುಪ್ರೀಂ ಕೋರ್ಟ್ ಹೇಳಿದ್ದೇನು?
2002ರ ಗಲಭೆಯಲ್ಲಿ ಬಿಲ್ಕಿಸ್ ಬಾನೊ ಅವರನ್ನು ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬದ ಏಳು ಸದಸ್ಯರನ್ನು ಹತ್ಯೆಗೈದ ಆರೋಪದ ಮೇಲೆ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ 11 ಅಪರಾಧಿಗಳನ್ನು ಅವಧಿಪೂರ್ವ ಬಿಡುಗಡೆ ಮಾಡಲು ಅವಕಾಶ ನೀಡಿದ್ದ ಗುಜರಾತ್ ಸರ್ಕಾರದ ಆದೇಶವನ್ನು ಜನವರಿ 8 ರಂದು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು.
ಗುಜರಾತ್ ಸರ್ಕಾರವು ಹಳಳೆಯ ಕಾನೂನು ಪ್ರಕಾರ ಆಗಸ್ಟ್ 14, 2023 ರಂದು ಅಪರಾಧಿಗಳನ್ನು ಬಿಡುಗಡೆ ಮಾಡಿತ್ತು.
ಸರ್ಕಾರದ ನಿರ್ಧಾರವನ್ನು ಬಿಲ್ಕಿಸ್ ಬಾನೊ ಸೇರಿದಂತೆ ವಿವಿಧ ಅರ್ಜಿದಾರರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
2002ರಲ್ಲಿ ಗೋಧ್ರಾ ರೈಲು ದಹನದ ಘಟನೆಯ ನಂತರ ಗುಜರಾತ್‌ನಲ್ಲಿ ನಡೆದ ಗಲಭೆಯಿಂದ ಪಲಾಯನ ಮಾಡುವಾಗ ಬಿಲ್ಕಿಸ್ ಬಾನೊ 11 ಜನರಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾದಾಗ 21 ವರ್ಷ ಮತ್ತು ಐದು ತಿಂಗಳ ಗರ್ಭಿಣಿಯಾಗಿದ್ದಳು. ಆಕೆಯ ಮೂರು ವರ್ಷದ ಮಗು ಸೇರಿದಂತೆ ಅವರ ಕುಟುಂಬದ ಏಳು ಸದಸ್ಯರು ಸಹ ಕೊಲ್ಲಲ್ಪಟ್ಟರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement