ಚೆನ್ನೈ: ರಾಷ್ಟ್ರಪ್ರಶಸ್ತಿ ವಿಜೇತ ಹಿನ್ನೆಲೆ ಗಾಯಕಿ ಭವತಾರಿಣಿ (47) ಅನಾರೋಗ್ಯದಿಂದ ಶ್ರೀಲಂಕಾದಲ್ಲಿ ಗುರುವಾರ ನಿಧನರಾದರು. ಭವತಾರಿಣಿ ಅವರು ಸಂಗೀತ ಮಾಂತ್ರಿಕ ಇಳಯರಾಜಾ ಅವರ ಪುತ್ರಿ.
ಅವರು ತಮಿಳು ಮಾತ್ರವಲ್ಲದೆ ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲೂ ಹಲವು ಗೀತೆಗಳನ್ನು ಹಾಡಿದ್ದಾರೆ. ಕ್ಯಾನ್ಸರ್‌ಗೆ ತುತ್ತಾಗಿದ್ದ ಭವತಾರಿಣಿ, ಕಳೆದ ಕೆಲವು ತಿಂಗಳುಗಳಿಂದ ಶ್ರೀಲಂಕಾದಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಮೂಲಗಳು ಹೇಳಿವೆ.
ಅವರು ಪತಿ, ಉದ್ಯಮಿ ಆರ್.ಶಬರಿರಾಜಾ, ಹಾಗೂ ಸಹೋದರರಾದ ಸಂಗೀತ ನಿರ್ದೇಶಕರಾದ ಯುವನ್ ಶಂಕರ್ ರಾಜಾ ಮತ್ತು ಕಾರ್ತಿಕ್ ರಾಜಾ ಅವರನ್ನು ಅಗಲಿದ್ದಾರೆ.
ಅವರ ಪಾರ್ಥಿವ ಶರೀರವನ್ನು ಜನವರಿ 26 ರಂದು ಚೆನ್ನೈಗೆ ತರಲಾಗುತ್ತಿದೆ. ಅಲ್ಲಿ ಅಂತಿಮ ವಿಧಿವಿಧಾನಗಳು ನಡೆಯಲಿವೆ.
2000 ರಲ್ಲಿ ‘ಭಾರತಿ’ ಚಿತ್ರದ ‘ಮಾಯಿಲ್ ಪೋಲ ಪೊನ್ನು ಒನ್ನು’ ತಮಿಳು ಹಾಡಿಗಾಗಿ ಅತ್ಯುತ್ತಮ ಹಿನ್ನೆಲೆ ಗಾಯಕಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದರು. ರಾಸಯ್ಯ ಚಿತ್ರದ ಮೂಲಕ ಗಾಯಕಿಯಾಗಿ ಪಾದಾರ್ಪಣೆ ಮಾಡಿದ ಭವತಾರಿಣಿ ಅವರು 2002 ರಲ್ಲಿ ಬಿಡುಗಡೆಯಾದ ಖ್ಯಾತ ನಟಿ ರೇವತಿ ನಿರ್ದೇಶನದ ಮಿತ್ರ, ಮೈ ಫ್ರೆಂಡ್ ಚಿತ್ರಗಳಿಗೆ ಸಂಗೀತ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು. ಆ ನಂತರ ಅವರು ‘ಫಿರ್ ಮಿಲೇಂಗೆ’ ಮತ್ತು ಕೆಲವೊಂದು ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದರು.
ಭವತಾರಿಣಿ ಅವರ ಕೊನೆಯ ಮ್ಯೂಸಿಕ್ ಆಲ್ಬಂ ಮಲಯಾಳಂ ಚಿತ್ರವಾದ ‘ಮಾಯಾನದಿ’. ಅವರು ತಮಿಳು ಚಲನಚಿತ್ರಗಳಾದ ‘ಕಾದಲುಕ್ಕು ಮರಿಯದೈ’, ‘ಭಾರತಿ’, ‘ಅಳಗಿ’, ‘ಫ್ರೆಂಡ್ಸ್’, ‘ಪಾ’, ‘ಮಂಕಥಾ’ ಮತ್ತು ‘ಅನೇಗನ್’ ಸೇರಿದಂತೆ ಹಲವು ಹಾಡುಗಳನ್ನು ಹಾಡಿದ್ದಾರೆ.
‘ತಮಿಅವರ ಸಾವು ತುಂಬಲಾರದ ನಷ್ಟವಾಗಿದೆ’ ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಸಂತಾಪ ಸೂಚಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ