ರಾಷ್ಟ್ರಪತಿಗೆ ಏಕವಚನದಲ್ಲಿ ಸಂಬೋಧಿಸಿದ ಸಿಎಂ ಸಿದ್ದರಾಮಯ್ಯ : ಸಿಎಂ ಸ್ಥಾನದಿಂದ ವಜಾಗೊಳಿಸಲು ಕುಮಾರಸ್ವಾಮಿ ಆಗ್ರಹ

 ಚಿತ್ರದುರ್ಗ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕವಚನ ಬಳಕೆ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಸೇರಿದಂತೆ ಅನೇಕರು ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶೋಷಿತರ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಶೋಷಿತ ಸಮುದಾಯಕ್ಕೆ ಸೇರಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವಳನ್ನು ನೂತನ ಸಂಸತ್‌ ಭವನ ಹಾಗೂ ಅಯೋಧ್ಯೆಯ ರಾಮಮಂದಿರದ ಉದ್ಘಾಟನೆಗೆ ಕರೆಯಲಿಲ್ಲ’ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಮಾತಿನ ಆವೇಶದಲ್ಲಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಏಕವಚನದಲ್ಲಿ ಸಂಬೋಧಿಸಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಸಿದ್ದರಾಮಯ್ಯ ಭಾಷಣದ ತುಣುಕನ್ನು ‘ಎಕ್ಸ್‌’ ಖಾತೆಯಲ್ಲಿ ಹಂಚಿಕೊಂಡಿರುವ ಎಚ್‌.ಡಿ. ಕುಮಾರಸ್ವಾಮಿ, ‘ಗೌರವಾನ್ವಿತ ರಾಷ್ಟ್ರಪತಿ, ದೇಶದ ಪ್ರಥಮ ಪ್ರಜೆ ಆಗಿರುವ ದ್ರೌಪದಿ ಮುರ್ಮು ಅವರಿಗೆ ಸಿದ್ದರಾಮಯ್ಯ ಏಕವಚನ ಬಳಸಿದ್ದಾರೆ. ತುಚ್ಛವಾಗಿ ಸಂಭೋದಿಸಿದ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೂಡಲೇ ವಜಾಗೊಳಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಬಿಜೆಪಿ ನಾಯಕ ಸಿ.ಟಿ.ರವಿ ಸಹ ರಾಷ್ಟ್ರಪತಿ ಅವರನ್ನು ಏಕವಚನದಲ್ಲಿ ಸಂಬೋಧಿಸಿದ ಸಿದ್ದರಾಮಯ್ಯ ಅವರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಹಾಗೂ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಶೋಷಿತರ ಹೆಸರಿನಲ್ಲಿ ಸಮಾವೇಶ ಮಾಡಿದ್ದಾರೆ. ಅಲ್ಲಿಗೆ ಬಂದವರು ಯಾರು? ಸ್ಪಾನ್ಸರ್ ಮಾಡಿದ್ದು ಯಾರು? ಭೈರತಿ ಸುರೇಶ್ ಕೋಟಿ ಕೋಟಿ ಹಣಕೊಟ್ಟು ಶೋಷಿತರ ಸಮಾವೇಶ ಮಾಡಿದ್ದಾರೆ. ಇವರು ಶೋಷಿತರಾ? ಹೆಸರು ಮಾತ್ರ ಶೋಷಿತ ಸಮಾವೇಶ ಅಷ್ಟೇ. ಸಿದ್ದರಾಮಯ್ಯನವರಿಗೆ ಅಧಿಕಾರ ತಪ್ಪಿ ಹೋಗಬಾರದು ಅಂತ ಶೋಷಿತ ಸಮಾವೇಶ ಮಾಡಿದ್ದಾರೆ ಎಂದರು.
ಶೋಷಿತರ ಸಮಾವೇಶದಲ್ಲಿ ಮಹಾಮಹಿಮ ರಾಷ್ಟ್ರಪತಿ ಅವರಿಗೆ ಕಿಂಚಿತ್ತು ಗೌರವ ಕೊಟ್ಟಿಲ್ಲ. ಮುಖ್ಯಮಂತ್ರಿಗಳು ಏಕವಚನದಲ್ಲಿ ರಾಷ್ಟ್ರಪತಿ ಬಗ್ಗೆ ಮಾತನಾಡಿದ್ದಾರೆ. ಮಹಿಳೆ ಎನ್ನುವುದನ್ನು ನೋಡದೆ ಅವಳು ಇವಳು ಎಂದು ಮಾತನಾಡಿದ್ದಾರೆ. ಇದು ಸಿದ್ದರಾಮಯ್ಯನವರ ಹಾಗೂ ಕಾಂಗ್ರೆಸ್​ನ ಸಂಸ್ಕೃತಿಯನ್ನು ತೋರಿಸುತ್ತದೆ. ರಾಷ್ಟ್ರಪತಿ ಸ್ಥಾನದ ಬಗ್ಗೆ ಕಿಂಚಿತ್ತು ಗೌರವ ಇದ್ದರೆ ಸಿದ್ದರಾಮಯ್ಯ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ರಾಷ್ಟ್ರಪತಿಗೆ ಏಕವಚನ ಬಳಕೆ: ವಿಷಾದ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ
ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನನ್ನಂತೆಯೇ ಶೋಷಿತ ಸಮಾಜದಿಂದ ಬಂದವರು. ಅವರ ಬಗ್ಗೆ ಅಪಾರ ಗೌರವವಿದೆ. ಅವರನ್ನು ಏಕವಚನದಲ್ಲಿ‌ ಸಂಬೋಧಿಸಬಾರದಿತ್ತು. ಅಚಾತುರ್ಯದಿಂದ ಆಗಿರುವ ಈ ಪ್ರಮಾದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
‘ಎಕ್ಸ್’ ನಲ್ಲಿ ಈ ಬಗ್ಗೆ ವಿಷಾದಿಸಿರುವ ಸಿದ್ದರಾಮಯ್ಯ ಅವರು, ‘ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಂಸತ್ ಭವನ ಉದ್ಘಾಟನೆಗೆ ಆಹ್ವಾನ ನೀಡದೆ ಬಿಜೆಪಿ ನಾಯಕರು ಅವಮಾನಿಸಿದ್ದಾರೆ. ಇದು ನನಗೆ ತೀವ್ರ ನೋವು ಉಂಟುಮಾಡಿತ್ತು. ಮಾತ್ರವಲ್ಲ ಆಕ್ರೋಶಕ್ಕೆ ಕಾರಣವಾಗಿತ್ತು’ ಎಂದು ತಿಳಿಸಿದ್ದಾರೆ.

‘ಶೋಷಿತರ ಜಾಗೃತಿ ಸಮಾವೇಶದಲ್ಲಿ ಸ್ವಲ್ಪ ಭಾವುಕನಾಗಿ ಈ ಆಕ್ರೋಶವನ್ನು ಹೊರಹಾಕುವ ಭರದಲ್ಲಿ ಬಾಯ್ತಪ್ಪಿನಿಂದ ರಾಷ್ಟ್ರಪತಿಯನ್ನು ಏಕವಚನದಲ್ಲಿ‌ ಸಂಭೋದಿಸಿದೆ. ಗ್ರಾಮೀಣ ಪ್ರದೇಶದಿಂದ ಬಂದ ನನ್ನಂತಹವರು ಅಪ್ಪ-ಅಮ್ಮ ಸೇರಿದಂತೆ ಹಿರಿಯರನ್ನು ಕೂಡಾ ಏಕವಚನದಲ್ಲಿ ಸಂಭೋದಿಸುವುದು ರೂಢಿ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಪ್ರದೇಶಗಳೂ ಸೇರಿ ದಕ್ಷಿಣ ಭಾರತದಲ್ಲಿ ಭಾರೀ ಮಳೆ ಮುನ್ಸೂಚನೆ

 

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement