ಇ.ಡಿ.ಯಿಂದ ಬಂಧನದ ಭೀತಿ: ಅಜ್ಞಾತ ಸ್ಥಳಕ್ಕೆ ತೆರಳಿದ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್

ನವದೆಹಲಿ : ಭೂ ಅಕ್ರಮ ಹಗರಣ ಸಂಬಂಧದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ತಂಡವು ನವದೆಹಲಿಯಲ್ಲಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಮಧ್ಯರಾತ್ರಿ ಅಜ್ಞಾತ ಸ್ಥಳಕ್ಕೆ ತೆರಳಿರುವ ಮುಖ್ಯಮಂತ್ರಿ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.
ಹಲವು ಬಾರಿ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಗೈರಾಗಿದ್ದ ಸೊರೇನ್‌ ಅವರಿಗೆ ಬಂಧನ ಭೀತಿ ಕಾಡುತ್ತಿರುವುದರಿಂದ ಅವರು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ.
ಇ.ಡಿ.ಗೆ ಕಳುಹಿಸದ ಮೇಲ್‌ನಲ್ಲಿ, ಸೊರೇನ್ ತಮಗೆ ಕಳುಹಿಸಲಾದ ಸಮನ್ಸ್‌ಗಳನ್ನು ರಾಜಕೀಯ ಕಾರ್ಯಸೂಚಿಯಿಂದ ಪ್ರೇರಿತವಾಗಿದೆ ಎಂದು ಆರೋಪಿಸಿದ್ದಾರೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡವು, ದೆಹಲಿಯಲ್ಲಿರುವ ಸೊರೇನ್‌ ಅವರ ಶಾಂತಿನಿಕೇತನ ನಿವಾಸ ಮತ್ತು ಜಾರ್ಖಂಡ್ ಭವನಗಳಿಗೆ ಸೋಮವಾರ ಭೇಟಿ ಕೊಟ್ಟು ಶೋಧ ನಡೆಸಿತಾದರೂ ಸೊರೇನ್‌ ವಿಚಾರಣೆ ಸಾಧ್ಯವಾಗಿಲ್ಲ. ಮುಖ್ಯಮಂತ್ರಿ ಸೊರೇನ್‌ ತಮ್ಮ ನಿವಾಸದಿಂದ ನಾಪತ್ತೆಯಾಗಿದ್ದು, ಅಜ್ಞಾತ ಸ್ಥಳ ಸೇರಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಜನವರಿ 29 ಅಥವಾ ಜನವರಿ 31 ರಂದು ವಿಚಾರಣೆಗೆ ಅವರ ಲಭ್ಯತೆಯನ್ನು ದೃಢೀಕರಿಸುವಂತೆ ಕಳೆದ ವಾರ ಏಜೆನ್ಸಿ ಅವರಿಗೆ ಹೊಸ ಸಮನ್ಸ್ ನೀಡಿತ್ತು ಎಂದು ಮೂಲಗಳು ತಿಳಿಸಿವೆ.
“ಇಲ್ಲಿ ಅಭೂತಪೂರ್ವ ಪರಿಸ್ಥಿತಿ. ಮುಖ್ಯಮಂತ್ರಿ ಎಲ್ಲಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ” ಎಂದು ಕೆಲವು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಂಎಂ) ಕಾರ್ಯಕಾರಿ ಅಧ್ಯಕ್ಷರೂ ಆಗಿರುವ 48 ವರ್ಷದ ಹೇಮಂತ್ ಸೊರೆನ್ ಅವರು ಯಾವುದೇ ವಿವರಣೆಯಿಲ್ಲದೆ ಸೋಮವಾರದ ನಿಗದಿತ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಜನವರಿ 27 ರಾತ್ರಿ ದೆಹಲಿಗೆ ತೆರಳಿದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2024 : 2ನೇ ಹಂತದ 88 ಕ್ಷೇತ್ರಗಳಲ್ಲಿ 63% ಮತದಾನ

ಸೊರೇನ್ ಅಜ್ಞಾತವಾಗಿ‌ ದೆಹಲಿಗೆ ಹೋಗುತ್ತಿದ್ದಾರೆ ಎಂಬ ವರದಿಗಳ ನಡುವೆ, ಅವರ ಲಭ್ಯತೆಯ ಬಗ್ಗೆ ಇ.ಡಿ.ಗೆ ಸೋಮವಾರ ಮೇಲ್ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. “ಜಾರ್ಖಂಡ್ ಮುಖ್ಯಮಂತ್ರಿ ಮತ್ತು ಜೆಎಂಎಂ ಕಾರ್ಯಾಧ್ಯಕ್ಷ ಹೇಮಂತ್ ಸೊರೆನ್ ಅವರು ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 31 ರಂದು ಇ.ಡಿ. ವಿಚಾರಣೆಗೆ ಕಾಲಾವಕಾಶ ನೀಡಿದ್ದಾರೆ. ಅವರ ಲಭ್ಯತೆ ಕುರಿತು ಇ.ಡಿ.ಗೆ ಮೇಲ್ ಕಳುಹಿಸಲಾಗಿದೆ ಎಂದು ಜೆಎಂಎಂ ಮೂಲಗಳು ತಿಳಸಿವೆ. ಜನವರಿ 31ರಂದು ಮಧ್ಯಾಹ್ನ 1 ಗಂಟೆಗೆ ತಮ್ಮ ನಿವಾಸದಲ್ಲಿ ಹೇಳಿಕೆ ದಾಖಲಿಸಿಕೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಸಿವೆ.

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement