ಕಾಶಿ ಜ್ಞಾನವಾಪಿ ಮಸೀದಿ ನೆಲಮಾಳಿಗೆಯಲ್ಲಿ ಹಿಂದೂಗಳ ಪ್ರಾರ್ಥನೆಗೆ ಅನುಮತಿಸಿದ್ದ ಆದೇಶಕ್ಕೆ ಮಧ್ಯಂತರ ತಡೆ ನೀಡಲು ಅಲಾಹಾಬಾದ್‌ ಹೈಕೋರ್ಟ್‌ ನಕಾರ

ಲಕ್ನೋ: ವಾರಾಣಸಿಯ ಜ್ಞಾನವಾಪಿ ಮಸೀದಿಯ ದಕ್ಷಿಣದ ನೆಲಮಾಳಿಗೆಯಲ್ಲಿ ಹಿಂದೂ ಪಕ್ಷಕಾರರಿಗೆ ಪ್ರಾರ್ಥನೆ ಮತ್ತು ಪೂಜೆ ನಡೆಸಲು ಅವಕಾಶ ನೀಡಿದ ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಲು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಜಿಲ್ಲಾ ನ್ಯಾಯಾಲಯದ ಜನವರಿ 31ರ ಆದೇಶವನ್ನು ಜಾರಿಗೊಳಿಸಿದ ಪರಿಣಾಮವಾಗಿ ಜನವರಿ 17ರ ಆದೇಶಕ್ಕೆ ಈ ಸವಾಲನ್ನು ಸೇರಿಸಿ ಮುಸ್ಲಿಂ ಪಕ್ಷಕಾರರಿಗೆ (ಜಿಲ್ಲಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ) ತನ್ನ ಅರ್ಜಿಗಳನ್ನು ತಿದ್ದುಪಡಿ ಮಾಡಲು ಹೈಕೋರ್ಟ್ ಫೆಬ್ರವರಿ 6ರವರೆಗೆ ಕಾಲಾವಕಾಶವನ್ನು ನೀಡಿದೆ. ತಿದ್ದುಪಡಿಯಾದ ಬಳಿಕ ಪ್ರಕರಣದ ವಿಚಾರಣೆಯನ್ನು ನಡೆಸಲಾಗುತ್ತದೆ.
ಅಲ್ಲಿಯವರಿಗೆ ಜ್ಞಾನವಾಪಿ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿರ್ವಹಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನ್ಯಾಯಾಲಯ ಆದೇಶಿಸಿದೆ.
ವಾರಾಣಸಿ ನ್ಯಾಯಾಲಯವು ಜನವರಿ 31ರಂದು ನೀಡಿರುವ ಆದೇಶ ಪ್ರಶ್ನಿಸಿ ಜ್ಞಾನವಾಪಿ ಸಮಿತಿ ಉಸ್ತುವಾರಿ ನಿಭಾಯಿಸುತ್ತಿರುವ ಅಂಜುಮನ್‌ ಇಂತೆಜಾಮಿಯಾ ಮಸ್ಜಿದ್‌ ಸಮಿತಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ರೋಹಿತ್‌ ರಂಜನ್‌ ಅಗರ್ವಾಲ್‌ ಅವರ ನೇತೃತ್ವದ ಏಕಸದಸ್ಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಜಿಲ್ಲಾ ದಂಡಾಧಿಕಾರಿಯನ್ನು ಪ್ರಕರಣದಲ್ಲಿ ರಿಸೀವರ್ ಆಗಿ ನೇಮಿಸಿ ಜನವರಿ 17ರಂದು ಮಾಡಲಾಗಿರುವ ಆದೇಶವನ್ನು ಮುಸ್ಲಿಮ್‌ ಪಕ್ಷಕಾರರು ಪ್ರಶ್ನಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ. ಮಸೀದಿಯ ನೆಲಮಾಳಿಗೆಯಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಮಾಡಿಕೊಡುವಂತೆ ಜಿಲ್ಲಾ ದಂಡಾಧಿಕಾರಿಗೆ ಜನವರಿ 31ರಂದು ನ್ಯಾಯಾಲಯ ಆದೇಶಿಸಿತ್ತು.
“ಜಿಲ್ಲಾ ದಂಡಾಧಿಕಾರಿಯನ್ನು ರಿಸೀವರ್‌ ಆಗಿ ನೇಮಕ ಮಾಡಿರುವ ಜನವರಿ 17ರ ಆದೇಶವನ್ನು ನೀವು ಪ್ರಶ್ನಿಸಿಲ್ಲ. ಜನವರಿ 31ರ ಆದೇಶವು ಇದರ ತತ್ಪರಿಣಾಮ ಆದೇಶವಾಗಿದೆ… ಹೀಗಾಗಿ, ನಿಮ್ಮ ಮೇಲ್ಮನವಿಯನ್ನು ತಿದ್ದುಪಡಿ ಮಾಡಬೇಕು” ಎಂದು ಪೀಠವು ಮುಸ್ಲಿಮ್‌ ಪಕ್ಷಕಾರರಿಗೆ ಸೂಚಿಸಿತು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿಯನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ ನಿವೃತ್ತ ನ್ಯಾಯಮೂರ್ತಿಗಳು

ಪ್ರಕರಣದ ತುರ್ತು ವಿಚಾರಣೆ ಅಗತ್ಯವಿದೆ. ಹಿಂದೂ ಪಕ್ಷಕಾರರು ಈಗಾಗಲೇ ವ್ಯಾಸ್‌ ತೆಹಖಾನಾದಲ್ಲಿ (ದಕ್ಷಿಣ ನೆಲಮಾಳಿಗೆ) ಪೂಜೆ ಆರಂಭಿಸಿದ್ದಾರೆ” ಎಂದು ಹಿರಿಯ ವಕೀಲ ಎಸ್‌ಎಫ್‌ಎ ನಖ್ವಿ ಪೀಠಕ್ಕೆ ಕೋರಿದರು. ಜಿಲ್ಲಾ ನ್ಯಾಯಾಲಯದ ಜನವರಿ 31ರ ಆದೇಶವನ್ನು ತುರ್ತಾಗಿ ಜಾರಿಗೊಳಿಸಿದ್ದು, ಗೊಂದಲದ ಪರಿಸ್ಥಿತಿ ನಿರ್ಮಾಣವಾಗಲು ಕಾರಣ. ಪೂಜೆಗೆ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಗಳಿಗೆ ಏಳು ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ನ್ಯಾಯಾಲಯದ ಸೂಚನೆಯಂತೆ ಆದೇಶ ಪ್ರಶ್ನಿಸಲಾಗುವುದು. ಆದರೆ, ಜನವರಿ 31ರ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿದರು. ಇದಕ್ಕೆ ಹಿಂದೂ ಪಕ್ಷಕಾರರನ್ನು ಪ್ರತಿನಿಧಿಸಿದ್ದ ವಕೀಲ ವಿಷ್ಣು ಜೈನ್‌ ಆಕ್ಷೇಪಿಸಿದರು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement