ಪಟ್ನಾ: ಬಿಹಾರದಲ್ಲಿ ನಿತೀಶಕುಮಾರ ನೇತೃತ್ವದ ಎನ್ಡಿಎ ಸರ್ಕಾರ ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದೆ. 129 ಶಾಸಕರು ನಿತೀಶ್ ಕುಮಾರ್ ಅವರನ್ನು ಬೆಂಬಲಿಸಿದ್ದಾರೆ.
ನಿತೀಶಕುಮಾರ ವಿಶ್ವಾಸಮತ ಸಾಬೀತುಪಡಿಸುತ್ತಿದಂತೆ ವಿರೋಧ ಪಕ್ಷ ಸದಸ್ಯರು ವಿಧಾನಸಭೆಯಿಂದ ಹೊರನಡೆದರು.
243 ಸದಸ್ಯಬಲದ ಬಿಹಾರ ವಿಧಾನಸಭೆಯಲ್ಲಿ ಜೆಡಿಯು 45 ಶಾಸಕರನ್ನು ಹೊಂದಿದೆ. ಬಿಜೆಪಿ ಮತ್ತು ಹಿಂದುಸ್ತಾನಿ ಅವಾಮ್ ಮೋರ್ಚಾ ಕ್ರಮವಾಗಿ 79 ಹಾಗೂ 4 ಶಾಸಕರನ್ನು ಹೊಂದಿವೆ. ಸ್ವತಂತ್ರ ಅಭ್ಯರ್ಥಿಯೊಬ್ಬರ ಬೆಂಬಲದಿಂದ ಈ ಒಕ್ಕೂಟದ ಒಟ್ಟು ಸದಸ್ಯಬಲ 128 ಆಗಲಿದೆ. ಮತ್ತೊಂದೆಡೆ ಮಹಾಘಟಬಂಧನದ ಬಳಿ 115 ಶಾಸಕರ ಬಲವಿದೆ. ಬಹುಮತ ಸಾಬೀತುಪಡಿಸಲು 122 ಸ್ಥಾನಗಳು ಅಗತ್ಯವಿತ್ತು.
ಮುಖ್ಯಮಂತ್ರಿ ನಿತೀಶಕುಮಾರ ಅವರ ಜೆಡಿಯು ಪಕ್ಷವು ಹದಿನೈದು ದಿನಗಳ ಹಿಂದಷ್ಟೇ ‘ಮಹಾಘಟಬಂಧನ್’ ಮೈತ್ರಿಕೂಟದಿಂದ ಹೊರ ಬಂದು, ಎನ್ಡಿಎ ಜತೆ ಸೇರಿ ಹೊಸ ಸರ್ಕಾರ ರಚಿಸಿತ್ತು.
ಜೆಡಿಯು-ಬಿಜೆಪಿ ಮೈತ್ರಿ ಸರ್ಕಾರದ ವಿಶ್ವಾಸಮತ ಯಾಚನೆಗೂ ಮುನ್ನ ರಾಷ್ಟ್ರೀಯ ಜನತಾ ದಳದ ಸ್ಪೀಕರ್ ಅವಧ್ ಬಿಹಾರಿ ಚೌಧರಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಯಿತು. ಬಿಹಾರ ವಿಧಾನಸಭಾ ಸ್ಪೀಕರ್ ಅವಧ್ ಬಿಹಾರಿ ಚೌಧರಿ ಅವರನ್ನು ಪದಚ್ಯುತಗೊಳಿಸಲಾಗಿದೆ. ಇದು ಮಹಾಮೈತ್ರಿಕೂಟಕ್ಕೆ ಹೊಡೆತವಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ