ಬೆಂಗಳೂರು : ಪಡಿತರ ಚೀಟಿಗಳಿಗಾಗಿ ಬಾಕಿ ಇರುವ ಅರ್ಜಿಗಳನ್ನು ಮಾರ್ಚ್ 31 ರೊಳಗಾಗಿ ಇತ್ಯರ್ಥಗೊಳಿಸಿ ಏಪ್ರಿಲ್ 1 ರಿಂದ ಬಿಪಿಎಲ್, ಎಪಿಎಲ್ ಕಾರ್ಡ್‍ಗಳನ್ನು ವಿತರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ಮೂಡಿಗೆರೆ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ ಅವರ ಪ್ರಶ್ನೆಗೆ ಅವರು ಉತ್ತರಿಸಿದರು. ಪಡಿತರ ಚೀಟಿಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಮಾರ್ಚ್ 31ರೊಳಗೆ ಪರಿಶೀಲಿಸಿ ಕಾರ್ಡ್‌ಗಳನ್ನು ವಿತರಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಕೆಲಸ ಮುಗಿದ ನಂತರ ಹೊಸ ಬಿಪಿಎಲ್ ಕಾರ್ಡ್‌ಗಳನ್ನು ವಿತರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಈ ಹಿಂದಿನ ಸರ್ಕಾರದ ಅವಧಿಯಲ್ಲಿ 2.95 ಲಕ್ಷ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್‌ಗಳಿಗಾಗಿ ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಚುನಾವಣಾ ಕಾರಣಕ್ಕೆ ಹೊಸಕಾರ್ಡ್ ನೀಡುವುದನ್ನು ಸ್ಥಗಿತಗೊಳಿಸಿದ್ದರಿಂದ ಅರ್ಜಿಗಳು ಬಾಕಿ ಉಳಿದಿದ್ದವು. ಅವುಗಳ ಪೈಕಿ ಈವರೆಗೆ 57 ಸಾವಿರ ಅರ್ಜಿಗಳಿಗೆ ಕಾರ್ಡ್ ನೀಡಲಾಗಿದೆ ಎಂದರು.
ಬಾಕಿ ಇರುವ ಅರ್ಜಿಗಳನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜಂಟಿ ಆಯುಕ್ತರು ಮತ್ತು ಉಪನಿರ್ದೇಶಕರು ಸ್ಥಳ ಪರಿಶೀಲನೆ ನಡೆಸಿ ಮಾರ್ಚ್ 31ರೊಳಗೆ ಇತ್ಯರ್ಥಪಡಿಸಲು ಗಡುವು ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಎಲ್ಲ ಶಾಸಕರ ಬೇಡಿಕೆಯಂತೆ ನಂತರ ಹೊಸ ಕಾರ್ಡ್‍ಗಳಿಗೆ ಏಪ್ರಿಲ್ 1 ರಿಂದಲೇ ಅರ್ಜಿ ಸ್ವೀಕರಿಸಲಾಗುತ್ತದೆ. ನಂತರ ಅರ್ಜಿಗಳನ್ನು 1 ತಿಂಗಳೊಳಗಾಗಿ ಇತ್ಯರ್ಥಪಡಿಸಲಾಗುವುದು ಎಂದು ಭರವಸೆ ನೀಡಿದ ಅವರು, ವೈದ್ಯಕೀಯ ಅಗತ್ಯಕ್ಕನುಗುಣವಾಗಿ ಸ್ವೀಕರಿಸಲಾದ 744 ಅರ್ಜಿಗಳಿಗೂ ಪಡಿತರ ಚೀಟಿಗಳನ್ನು ನೀಡಲಾಗಿದೆ. ಇಂತಹ ಅರ್ಜಿಗಳನ್ನು ವಾರದೊಳಗಾಗಿ ಇತ್ಯರ್ಥಪಡಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಅನ್ನಭಾಗ್ಯ ಯೋಜನೆಯಡಿ ನಗದು ಜಮಾವಣೆಗೊಳ್ಳುತ್ತಿದ್ದು, ಶೇ.95 ರಷ್ಟು ಜನರಿಗೆ ಸೌಲಭ್ಯ ಸಿಕ್ಕಿದೆ. ತಾಂತ್ರಿಕ ಕಾರಣದಿಂದ ಶೇ.5 ರಷ್ಟು ವ್ಯತ್ಯಾಸವಾಗಿದೆ ಎಂದರು.
ನಿಮ್ಮ ಕಾಮೆಂಟ್ ಬರೆಯಿರಿ