ಕರ್ನಾಟಕ ಬಜೆಟ್ 2024 : ಅಂಜನಾದ್ರಿ ಬೆಟ್ಟ ಅಭಿವೃದ್ಧಿ ಘೋಷಣೆ ; ‘ಸಿ’ ವರ್ಗದ ದೇವಾಲಯಗಳ ಅರ್ಚಕರ ಬ್ಯಾಂಕ್ ಖಾತೆಗಳಿಗೆ ತಸ್ತಿಕ್ ಮೊತ್ತ ಜಮೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿನ ಪವಿತ್ರ ಪುಣ್ಯಕ್ಷೇತ್ರಗಳ ಅಭಿವೃದ್ಧಿ ಹಾಗೂ ಕರ್ನಾಟಕದಿಂದ ಹೋಗುವ ಭಕ್ತರ ಅನುಕೂಲಕ್ಕೆ ಹಲವಾರು ಘೋಷಣೆಗಳನ್ನು ಮಾಡಿದ್ದಾರೆ. ಸಿ ವರ್ಗದ ದೇವಸ್ಥಾನಗಳ ಅರ್ಚಕರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ತಸ್ತಿಕ್ ಮೊತ್ತ ಜಮೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಹೊರ ರಾಜ್ಯಗಳ ಪುಣ್ಯಕ್ಷೇತ್ರಗಳಾದ ತಿರುಮಲ, ಶ್ರೀಶೈಲ, ವಾರಾಣಸಿ ಮತ್ತು ಗುಡ್ಡಾಪುರಕ್ಕೆ ಭೇಟಿ ನೀಡುವ ಕರ್ನಾಟಕದ ಭಕ್ತರ ಅನುಕೂಲಕ್ಕಾಗಿ ಸುಸಜ್ಜಿತ ವಸತಿ ಸಂಕೀರ್ಣಗಳನ್ನು ನಿರ್ಮಿಸಲಾಗುತ್ತಿದೆ. ತಿರುಮಲದಲ್ಲಿ 200 ಕೋಟಿ ರೂ.ಗಳ ಕಾಮಗಾರಿ ಅಂತಿಮ ಹಂತದಲ್ಲಿದೆ. ಶ್ರೀಶೈಲದಲ್ಲಿ 85 ಕೋಟಿ ರೂ. ವೆಚ್ಚದಲ್ಲಿ ಮತ್ತು ಗುಡ್ಡಾಪುರದಲ್ಲಿ 11 ಕೋಟಿ ರೂ. ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ. ಪ್ರಸಕ್ತ ಸಾಲಿನಲ್ಲಿ ವಾರಣಾಸಿಯಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು. ಅಲ್ಲದೆ, ಮಂತ್ರಾಲಯಕ್ಕೆ ಸಂಪರ್ಕ ಕಲ್ಪಿಸಲು ರಾಯಚೂರಿನ ಚಿಕ್ಕಮಂಚಾಲಿ ಗ್ರಾಮದ ಬಳಿ ಬ್ರಿಡ್ಜ್-ಕಂ-ಬ್ಯಾರೇಜ್ ನಿರ್ಮಾಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ವತಿಯಿಂದ ಕೈಗೆತ್ತಿಕೊಳ್ಳಲಾಗುತ್ತದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶ್ರೀ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಹಾಗೂ ಕೊಪ್ಪಳ ಜಿಲ್ಲೆ ಹುಲಿಗೆಮ್ಮ ದೇವಾಲಯದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಾಧಿಕಾರಗಳನ್ನು ರಚಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆ : ತಾಯಿ-ಮಗು ಸಾವು

ಸವದತ್ತಿಯ ಶ್ರೀ ಕ್ಷೇತ್ರಾ ರೇಣುಕಾ ಯಲ್ಲಮ್ಮನ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಸಂರಕ್ಷಿಸಿ ಅಭಿವೃದ್ಧಿಗೊಳಿಸಲು ಶ್ರೀ ರೇಣುಕಾ ಕ್ಷೇತ್ರ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯನ್ನು ರಚಿಸಿ ಅಧಿಸೂಚನೆ ಹೊರಡಿಸಲಾಗುತ್ತದೆ. ಹಾಗೂ ಪೌರಾಣಿಕ ಹಾಗೂ ಐತಿಹಾಸಿಕವಾಗಿ ಪ್ರಖ್ಯಾತಿ ಹೊಂದಿರುವ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರವಾಸಿ ಸೌಲಭ್ಯ ಅಭಿವೃದ್ಧಿಪಡಿಸಲು 100 ಕೋಟಿ ರೂ.ಗಳನ್ನು ಒದಗಿಸಲಾಗಿದೆ.
ಅಲ್ಲದೆ, ಆದಾಯವಿಲ್ಲದ ರಾಜ್ಯದ 34,165 ‘ಸಿ’ ವರ್ಗದ ಐತಿಹಾಸಿಕ ದೇವಾಲಯಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಮಾಜದ ಗಣ್ಯರು ಮತ್ತು ಸಂಬಂಧಪಟ್ಟ ಇಲಾಖೆಗಳ ಪ್ರತಿನಿಧಿಗಳನ್ನೊಳಗೊಂಡ ವಿಜನ್‌ ಗ್ರುಪ್‌ ರಚಿಸಲಾಗುವುದು ಎಂದು ಹೇಳಿದ್ದಾರೆ.
ಇನ್ಮುಂದೆ ‘ಸಿ’ ವರ್ಗದ ದೇವಾಲಯಗಳ ಅರ್ಚಕರ ಬ್ಯಾಂಕ್ ಖಾತೆಗೆ ತಸ್ತಿಕ್ ಮೊತ್ತ ಜಮೆ…
ಇನಾಂ/ಇನಾಂಯೇತರ ಜಮೀನು ಕಳೆದುಕೊಂಡ ರಾಜ್ಯದ 29,523 ‘ಸಿ’ ವರ್ಗದ ದೇವಾಲಯಗಳ ಅರ್ಚಕರುಗಳಿಗೆ ತಸ್ತಿಕ್ ಮೊತ್ತವನ್ನು ಇನ್ಮುಂದೆ ಅರ್ಚಕರುಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ ಎಂದು ಸಿದ್ದರಾಮಯ್ಯ ಅವರು ಪ್ರಕಟಿಸಿದ್ದಾರೆ.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement