ಚಂಡೀಗಢ ಮೇಯರ್ ಆಯ್ಕೆ ಪ್ರಕರಣ : ಸುಪ್ರೀಂ ಕೋರ್ಟ್ ವಿಚಾರಣೆಗೆ ಮುಂಚಿತವಾಗಿ 3 ಎಎಪಿ ಕೌನ್ಸಿಲರ್‌ಗಳು ಬಿಜೆಪಿಗೆ ಸೇರ್ಪಡೆ

ಚಂಡೀಗಢ: ಮೇಯರ್ ಚುನಾವಣೆಯಲ್ಲಿ ಅಕ್ರಮ ಎಸಗಿದ ಆರೋಪದ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆಗೆ ಒಂದು ದಿನ ಮುಂಚಿತವಾಗಿ ಬಿಜೆಪಿ ನಾಯಕ ಮನೋಜ ಸೋಂಕರ್ ಅವರು ಭಾನುವಾರ ಸಂಜೆ ಚಂಡೀಗಢ ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಂತರದ ಬೆಳವಣಿಗೆಯಲ್ಲಿ ಆಮ್‌ ಆದ್ಮಿ ಪಕ್ಷದ ಮೂವರು ಕೌನ್ಸಿಲರ್‌ಗಳು ಬಿಜೆಪಿ ಸೇರುವ ಮೂಲಕ ಎಎಪಿಗೆ ಆಘಾತ ನೀಡಿದ್ದಾರೆ.
ಜನವರಿ 30 ರಂದು ನಡೆದ ಚಂಡೀಗಢ ಮೇಯರ್‌ ಚುನಾವಣೆಯಲ್ಲಿ ಮನೋಜ ಸೋಂಕರ್ ಅವರು ಆಮ್ ಆದ್ಮಿ ಪಕ್ಷದ (ಎಎಪಿ) ಕುಲದೀಪಕುಮಾರ ಸಿಂಗ್‌ ಅವರನ್ನು ಸೋಲಿಸಿದ್ದರು. ಬಿಜೆಪಿ 16 ಮತಗಳನ್ನು ಪಡೆದು ವಿಜಯಿಯಾಗಿದ್ದರೆ ಕಾಂಗ್ರೆಸ್ ಮತ್ತು ಎಎಪಿ ಜಂಟಿ ಅಭ್ಯರ್ಥಿ ಕುಲದೀಪ ಸಿಂಗ್ 12 ಮತಗಳನ್ನು ಗಳಿಸಲು ಶಕ್ತರಾದರು. 8 ಮತಗಳನ್ನುಅಸಿಂಧು ಎಂದು ಘೋಷಿಸಲಾಯಿತು. ಅದು ಈಗ ಬಿಜೆಪಿ ಮತ್ತು ವಿಪಕ್ಷಗಳ ನಡುವಿನ ವಿವಾದದ ಕೇಂದ್ರಬಿದ್ದುವಾಗಿದ್ದು, ಎಂಟು ಮತಗಳನ್ನು ಅಸಿಂಧುವೆಂದು ಘೋಷಿಸಿದ ಪ್ರಿಸೈಡಿಂಗ್‌ ಅಧಿಕಾರಿ ಕ್ರಮವನ್ನು ಪ್ರಶ್ನಿಸಿ ಎಎಪಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಇಂದು ಸೋಮವಾರ ಅದರ ವಿಚಾರಣೆ ನಡೆಯಲಿದೆ.

ಪ್ರಮುಖ ಸುದ್ದಿ :-   ಬೆಂಬಲ ಹಿಂಪಡೆದ ಮೂವರು ಪಕ್ಷೇತರ ಶಾಸಕರು : ಸಂಕಷ್ಟದಲ್ಲಿ ಹರಿಯಾಣದ ಬಿಜೆಪಿ ಸರ್ಕಾರ

ಆದಾಗ್ಯೂ, ಎಎಪಿಗೆ ತೊಂದರೆಗಳು ಎದುರಾಗಿದ್ದು, ಅದರ ಮೂವರು ಕೌನ್ಸಿಲರ್‌ಗಳಾದ ಪೂನಂ ದೇವಿ, ನೇಹಾ ಮತ್ತು ಗುರುಚರಣ ಕಲಾ ಅವರು ಭಾನುವಾರ ಬಿಜೆಪಿಗೆ ಸೇರ್ಪಡೆಗೊಂಡರು. 35 ಸದಸ್ಯರ ಚಂಡೀಗಢ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ ಬಿಜೆಪಿ 14 ಕೌನ್ಸಿಲರ್‌ಗಳನ್ನು ಹೊಂದಿತ್ತು ಮತ್ತು ಇಂದಿನ ಸೇರ್ಪಡೆಯ ನಂತರ, ಅದರ ಸಂಖ್ಯೆ 17 ಆಗಿದೆ. ಬಿಜೆಪಿ ಶಿರೋಮಣಿ ಅಕಾಲಿದಳದ ಕೌನ್ಸಿಲರ್‌ನ ಬೆಂಬಲವನ್ನೂ ಪಡೆದಿದೆ ಮತ್ತು ಬಿಜೆಪಿಯ ಚಂಡೀಗಢ ಸಂಸದ ಕಿರಣ ಖೇರ್ ಅವರು ಪದನಿಮಿತ್ತವಾಗಿ ಮತದಾನದ ಹಕ್ಕು ಹೊಂದಿದ್ದಾರೆ. ಅವರು ಬಿಜೆಪಿಯನ್ನು ಮ್ಯಾಜಿಕ್ ಸಂಖ್ಯೆ 19 ಕ್ಕೆ ತರುವ ಸದಸ್ಯರಾಗಿದ್ದಾರೆ.ಎಎಪಿ ಈಗ 10 ಕೌನ್ಸಿಲರ್‌ಗಳನ್ನು ಹೊಂದಿದ್ದರೆ, ಅದರ ಮಿತ್ರಪಕ್ಷ ಕಾಂಗ್ರೆಸ್ ಏಳು ಸದಸ್ಯರನ್ನು ಹೊಂದಿದೆ.

ಜನವರಿ 30 ರಂದು ಫಲಿತಾಂಶಗಳು ಪ್ರಕಟವಾದ ಕೂಡಲೇ, ಕಾಂಗ್ರೆಸ್ ಮತ್ತು ಎಎಪಿ ಕೌನ್ಸಿಲರ್‌ಗಳು ಸರಿಯಾದ ಚುನಾವಣಾ ಪ್ರಕ್ರಿಯೆಯನ್ನು ಅನುಸರಿಸಿಲ್ಲ ಎಂದು ಆರೋಪಿಸಿದ ನಂತರ ಸದನದಲ್ಲಿ ಗೊಂದಲ ಉಂಟಾಯಿತು. ಪ್ರಿಸೈಡಿಂಗ್‌ ಅಧಿಕಾರಿ ಅನಿಲ ಮಸಿಹ್ ಅವರು ಮತಪತ್ರಗಳನ್ನು ತಿರುಚಿದ್ದಾರೆ ಎಂದು ಆರೋಪಿಸಲಾಯಿತು. ಹಾಗೂ ನಂತರ ಸುಪ್ರೀಂ ಕೋರ್ಟ್‌ಗೆ ಈ ಕುರಿತು ಸಾಕ್ಷ್ಯವಾಗಿ ವೀಡಿಯೊವೊಂದನ್ನು ಸಲ್ಲಿಸಲಾಯಿತು. ಬಿಜೆಪಿ ಈ ಆರೋಪವನ್ನು ತಳ್ಳಿಹಾಕಿದೆ.
ವೀಡಿಯೊ ನೋಡಿದ ನಂತರ ದಿಗ್ಭ್ರಮೆಗೊಂಡ ಸುಪ್ರೀಂ ಕೋರ್ಟ್, ಇದು ಪ್ರಜಾಪ್ರಭುತ್ವದ ಅಣಕ ಎಂದು ಹೇಳಿದ್ದು, ಮತಪತ್ರಗಳು ಮತ್ತು ಚುನಾವಣಾ ಪ್ರಕ್ರಿಯೆಗಳ ವೀಡಿಯೊವನ್ನು ಸಂರಕ್ಷಿಸುವಂತೆ ಆದೇಶಿಸಿದೆ.
“ಇದು ಚುನಾವಣಾಧಿಕಾರಿಯ ವರ್ತನೆಯೇ? ಅವರು ಕ್ಯಾಮೆರಾವನ್ನು ನೋಡುತ್ತಾರೆ ಮತ್ತು ಸ್ಪಷ್ಟವಾಗಿ ಮತಪತ್ರವನ್ನು ವಿರೂಪಗೊಳಿಸುತ್ತಾರೆ” ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಅವರು ಎಣಿಕೆಯ ವೀಡಿಯೊವನ್ನು ವೀಕ್ಷಿಸಿದ ನಂತರ ಹೇಳಿದರು. ನಿಯೋಜಿತ ಪ್ರಿಸೈಡಿಂಗ್‌ ಅಧಿಕಾರಿ ಫೆಬ್ರವರಿ 19 ರಂದು ತನ್ನ ಮುಂದೆ ಹಾಜರಾಗಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ಪ್ರಮುಖ ಸುದ್ದಿ :-   'ನಮ್ಮಲ್ಲಿಗೆ ಪ್ರವಾಸಕ್ಕೆ ಬನ್ನಿ, ನಮ್ಮ ಆರ್ಥಿಕತೆ ಬೆಂಬಲಿಸಿ' : ಹದಗೆಟ್ಟ ಸಂಬಂಧಗಳ ಮಧ್ಯೆ ಭಾರತದ ಪ್ರವಾಸಿಗರಿಗೆ ಮನವಿ ಮಾಡಿದ ಮಾಲ್ಡೀವ್ಸ್ ಸರ್ಕಾರ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement