ಕೇವಲ ಒಂದೇ ಒಂದು ಸುಳಿವಿನಿಂದ 22 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾಂಟೆಡ್ ಸಿಮಿ ಉಗ್ರನ ಬಂಧಿಸಿದ ಪೊಲೀಸರು…!

ನವದೆಹಲಿ: 22 ವರ್ಷಗಳಿಂದ ತಲೆಮರೆಸಿಕೊಂಡಿದ್ದ ನಿಷೇಧಿತ ಸ್ಟುಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ) ಸಂಘಟನೆಗೆ ಸೇರಿದ್ದ ಹನೀಫ್ ಶೇಖ್ (47) ಎಂಬ ಉಗ್ರನನ್ನು ದೆಹಲಿ ಪೊಲೀಸರ ವಿಶೇಷ ಘಟಕ ಫೆ 22ರಂದು ಬಂಧಿಸಿದೆ.
22 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆತನನ್ನು ಕೇವಲ ಒಂದೇ ಒಂದು ಸುಳಿವಿನ ಸಹಾಯದಿಂದ ಪೊಲೀಸರು ಬಂಧಿಸಿದ್ದಾರೆ. ಅತ್ಯಂತ ನಟೋರಿಯಸ್ ಮತ್ತು ವಾಂಟೆಡ್ ಸಿಮಿ ಉಗ್ರ ಎಂದು ದೆಹಲಿ ಪೊಲೀಸರು ಘೋಷಿಸಿದ್ದ ಹನೀಫ್ ಶೇಖ್, ಮೊಹಮದ್ ಹನೀಫ್ ಮತ್ತು ಹನೀಫ್ ಹುದೈ ಎಂಬ ಅಲಿಯಾಸ್ ಹೆಸರುಗಳನ್ನೂ ಹೊಂದಿದ್ದ. ಆತ ಸಿಮಿ ಅಡಿ ಪ್ರಕಟವಾಗುತ್ತಿದ್ದ ನಿಯತಕಾಲಿಕೆಯ ಸಂಪಾದಕನಾಗಿದ್ದಾಗ ಬಳಸುತ್ತಿದ್ದ ಈ ಅಲಿಯಾಸ್ ಹೆಸರು, ಆತನ ಪತ್ತೆಗೆ ಮಹತ್ವದ ಸುಳಿವು ನೀಡಿದೆ.

22 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈತನನ್ನು 2002ರಲ್ಲಿ ಘೋಷಿತ ಅಪರಾಧಿ ಎಂದು ಘೋಷಿಸಲಾಗಿತ್ತು.ಆತನ ವಿರುದ್ಧ 2001 ರಲ್ಲಿ ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ದೇಶದ್ರೋಹದ ಆರೋಪ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ವಿವಿಧ ಅಪರಾಧಗಳ ಮೇಲೆ ಪ್ರಕರಣ ದಾಖಲಾಗಿತ್ತು.
ಪೊಲೀಸರ ಪ್ರಕಾರ, ಹನೀಫ್ ಶೇಖ್ ಸಿಮಿ ಅಧೀನದಲ್ಲಿರುವ ‘ಇಸ್ಲಾಮಿಕ್ ಮೂವ್‌ಮೆಂಟ್’ ನಿಯತಕಾಲಿಕದ ಸಂಪಾದಕನಾಗಿದ್ದು, ನಿಷೇಧಿತ ಸಂಘಟನೆಗೆ ಹೆಚ್ಚಿನ ಸದಸ್ಯರನ್ನು ಸೇರಿಸುವಲ್ಲಿ ತೊಡಗಿಸಿಕೊಂಡಿದ್ದ. ಆತನ ಗುರುತು ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ ಮತ್ತು ಪೊಲೀಸರ ಬಳಿ ಇದ್ದ ಏಕೈಕ ಸುಳಿವು ಎಂದರೆ ಪತ್ರಿಕೆಯಲ್ಲಿ ಮುದ್ರಿಸಲಾದ ‘ಹನೀಫ್ ಹುದಾಯಿ’. ದೆಹಲಿ ಪೊಲೀಸರ ದಕ್ಷಿಣ ರೇಂಜ್ ಸ್ಪೆಷಲ್ ಘಟಕ ನಾಲ್ಕು ವರ್ಷಗಳಿಂದ ಹನೀಫ್ ಶೇಖ್ ನನ್ನು ಬಂಧಿಸಲು ಪ್ರಯತ್ನಿಸುತ್ತಿತ್ತು.

ಪೊಲೀಸರು ಹನೀಫ್ ಶೇಖ್ ಪತ್ತೆ ಮಾಡಿದ್ದು ಹೇಗೆ..?
ಪೊಲೀಸರ ಪ್ರಕಾರ, ಮಹಾರಾಷ್ಟ್ರ, ಮಧ್ಯಪ್ರದೇಶ, ದೆಹಲಿ, ಕರ್ನಾಟಕ ಮತ್ತು ಕೇರಳದಲ್ಲಿ ಸಿಮಿ ಸಭೆಗಳಲ್ಲಿ ಪಾಲ್ಗೊಳ್ಳುವಲ್ಲಿ ಹನೀಫ್ ಶೇಖ್ ಪ್ರಮುಖ ಪಾತ್ರ ವಹಿಸಿದ್ದ. ಆದರೆ, ನಿಷೇಧಿತ ಸಂಘಟನೆಯ ಚಟುವಟಿಕೆಗಳ ಮೇಲೆ ಪೊಲೀಸರು ಕಡಿವಾಣ ಹಾಕಿದಾಗಲೆಲ್ಲ ಹನೀಫ್ ಶೇಖ್ ಪೊಲೀಸರ ಕೈಯಿಂದ ಜಾರಿಕೊಳ್ಳುತ್ತಿದ್ದ. ಶೇಖ್ ನನ್ನು ಬಂಧಿಸಲು ದೆಹಲಿ ಪೊಲೀಸರ ದಕ್ಷಿಣ ರೇಂಜ್ ಸ್ಪೆಷಲ್ ಘಟಕ ವಿವಿಧ ರಾಜ್ಯಗಳಿಂದ ಆತನ ಬಗ್ಗೆ ಮಾಹಿತಿ ಸಂಗ್ರಹಿಸಲು ಆರಂಭಿಸಿತು. ಶೇಖ್ ಮತ್ತು ಆತನ ಸಹಚರರನ್ನು ಪತ್ತೆಹಚ್ಚಲು ತಂಡವು ತಮ್ಮ ಮಾಹಿತಿದಾರರನ್ನು ಏಳು ರಾಜ್ಯಗಳಲ್ಲಿ ನಿಯೋಜಿಸಿತು.
ಆಗ ಶೇಖ್ ತನ್ನ ಗುರುತನ್ನು ಬದಲಾಯಿಸಿಕೊಂಡಿದ್ದಾನೆ ಮತ್ತು ಮಹಾರಾಷ್ಟ್ರದ ಭುಸಾವಾಲ್‌ನಲ್ಲಿರುವ ಉರ್ದು ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಮಾಹಿತಿದಾರರೊಬ್ಬರು ಪೊಲೀಸರಿಗೆ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ಮುಸ್ಲಿಂ ಮತಗಳು ಬೇಕು, ಆದರೆ ಟಿಕೆಟ್‌ ಕೊಡಲ್ಲ : ಕಾಂಗ್ರೆಸ್‌ ಬಗ್ಗೆ ನಸೀಂ ಖಾನ್ ತೀವ್ರ ಅಸಮಾಧಾನ, ಹುದ್ದೆಗೆ ರಾಜೀನಾಮೆ

ಫೆ. 22ರಂದು ಮೊಹ್ಮದಿನ್ ನಗರದಿಂದ ಖಾಡ್ಕಾ ರಸ್ತೆಗೆ ತೆರಳುತ್ತಿದ್ದ ಶಂಕಿತ ವ್ಯಕ್ತಿಯನ್ನು ಪೊಲೀಸರು ಗುರುತಿಸಿದ್ದರು. ಹನೀಫ್‌ನನ್ನು ಪೊಲೀಸರು ಸುತ್ತುಗಟ್ಟಿದ್ದಾಗ ಎರಡೂ ಕಡೆಯವರ ನಡುವೆ ಜಗಳ ನಡೆಯಿತು.
“ಫೆಬ್ರವರಿ 22 ರಂದು ಮಧ್ಯಾಹ್ನ 2:50 ರ ಸುಮಾರಿಗೆ ಮೊಹಮ್ಮದೀನ್ ನಗರದಿಂದ ಖಡ್ಕಾ ರಸ್ತೆಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನು ಹನೀಫ್ ಎಂದು ಗುರುತಿಸಲಾಗಿದೆ. ತಂಡದ ಸದಸ್ಯರು ಅವನನ್ನು ಸುತ್ತುವರಿಯಲು ಮುಂದಾದಾಗ, ಹನೀಫ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ. ಆದರೆ ಕೈಕೈ ಮಿಲಾಯಿಸಿದ ನಂತರ ಆತನನ್ನು ಬಂಧಿಸಲಾಯಿತು” ಎಂದು ಉಪ ಪೊಲೀಸ್ ಆಯುಕ್ತ (ವಿಶೇಷ ಸೆಲ್) ಅಲೋಕಕುಮಾರ ತಿಳಿಸಿದ್ದಾರೆ. ಎರಡು ದಶಕಗಳ ನಂತರ ತಲೆಮರೆಸಿಕೊಂಡಿದ್ದ ವಾಂಟೆಡ್‌ ಉಗ್ರನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹನೀಫ್ ಶೇಖ್ ಯಾರು?
ಹನೀಫ್ ಶೇಖ್ 1997 ರಲ್ಲಿ ಸಿಮಿ (SIMI)ಗೆ ಸೇರಿದ್ದಾನೆ ಮತ್ತು ಅದರ ಸದಸ್ಯರೊಂದಿಗೆ ಸಂವಹನ ನಡೆಸಿದ ನಂತರ ಹೆಚ್ಚು ತೀವ್ರಗಾಮಿಯಾದ. ನಂತರ ಆತ ಇತರ ಮುಸ್ಲಿಮ್‌ ಯುವಕರನ್ನು ಸಂಘಟನೆಗೆ ಸೇರಿಸಿಕೊಳ್ಳಲು ತೊಡಗಿದ. 2001 ರಲ್ಲಿ, ಸಿಮಿ ಅಧ್ಯಕ್ಷನಾಗಿದ್ದ ಸಾಹಿದ್ ಬದರ್ , ಹನೀಫ್ ಶೇಖ್ ನನ್ನು ‘ಇಸ್ಲಾಮಿಕ್ ಮೂವ್ಮೆಂಟ್’ ನ ಉರ್ದು ಆವೃತ್ತಿಯ ಸಂಪಾದಕನನ್ನಾಗಿ ನೇಮಿಸಿದ. ಶೇಖ್ ಪತ್ರಿಕೆಯ ಸಂಪಾದಕನಾಗಿದ್ದಾಗ ಭಾರತದಲ್ಲಿ ಮುಸ್ಲಿಮರ ಬಗ್ಗೆ ಹಲವಾರು ಪ್ರಚೋದನಕಾರಿ ಲೇಖನಗಳನ್ನು ಬರೆದಿದ್ದ.
ದೆಹಲಿಯ ಝಾಕಿರ್ ನಗರದಲ್ಲಿರುವ ಸಿಮಿ ಕೇಂದ್ರ ಕಚೇರಿಯಲ್ಲಿ ಶೇಖ್ ಗೆ ಕೊಠಡಿ ನೀಡಲಾಗಿತ್ತು. ಸೆಪ್ಟೆಂಬರ್ 27, 2001 ರಂದು, ಸಿಮಿಯ ಪದಾಧಿಕಾರಿಗಳು ತಮ್ಮ ಪ್ರಧಾನ ಕಚೇರಿಯ ಬಳಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ದೆಹಲಿ ಪೊಲೀಸರು ದಾಳಿ ನಡೆಸಿದ್ದರು.
ಹಲವಾರು ಸಿಮಿ ಸದಸ್ಯರನ್ನು ಬಂಧಿಸಲಾಯಿತು ಆದರೆ ಹನೀಫ್ ಶೇಖ್ ಮತ್ತು ಇತರ ಅನೇಕರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ ಮತ್ತು ಭೂಗತರಾದರು.

ಪ್ರಮುಖ ಸುದ್ದಿ :-   ಮುಂಬೈ ನಾರ್ತ್ ಸೆಂಟ್ರಲ್ ಕ್ಷೇತ್ರದಿಂದ ಮುಂಬೈ 26/11 ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ವಾದಿಸಿದ್ದ ಉಜ್ವಲ್ ನಿಕಮ್ ಕಣಕ್ಕಿಳಿಸಿದ ಬಿಜೆಪಿ

ನಂತರ ಶೇಖ್ ಮಹಾರಾಷ್ಟ್ರದ ಜಲಗಾಂವ್‌ಗೆ ತೆರಳಿ ಅಲ್ಲಿಂದ ಭೂಸಾವಲ್‌ಗೆ ತೆರಳಿದ್ದಾನೆ. ಬಂಧನದಿಂದ ತಪ್ಪಿಸಿಕೊಳ್ಳಲು ಆತ ತನ್ನ ಸ್ಥಳವನ್ನು ಬದಲಾಯಿಸುತ್ತಲೇ ಇದ್ದ ಮತ್ತು ಭುಸಾವಾಲ್‌ನ ಶಾಲೆಯಲ್ಲಿ ಉರ್ದು ಶಿಕ್ಷಕನಾಗಿ ಕೆಲಸ ಮಾಡಲು ಪ್ರಾರಂಭಿಸಿದ.ಯುವಕರನ್ನು ಸಿಮಿ ಸೇರುವಂತೆ ಪ್ರೇರೇಪಿಸಲು ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್ ಮೊದಲಾದ ಹಲವು ಸ್ಥಳಗಳಿಗೆ ಭೇಟಿ ನೀಡಿದ್ದಾಗಿಯೂ ಆತ ಒಪ್ಪಿಕೊಂಡಿದ್ದಾನೆ.
ಸಿಮಿಯನ್ನು ನಿಷೇಧಿಸಿದ ನಂತರ, ಅದರ ಕೆಲವು ಹಿರಿಯ ಸದಸ್ಯರು ‘ವಹಾದತ್-ಎ-ಇಸ್ಲಾಂ’ ಎಂಬ ಹೊಸ ಸಂಘಟನೆಯನ್ನು ಪ್ರಾರಂಭಿಸಿದರು. ಹನೀಫ್ ಶೇಖ್ ಅದರ ಥಿಂಕ್ ಟ್ಯಾಂಕ್ ಸದಸ್ಯರಲ್ಲಿ ಒಬ್ಬನಾಗಿದ್ದ ಮತ್ತು ಹಣಕಾಸು ಒದಗಿಸಲು ಹಣ ಸಂಗ್ರಹದಲ್ಲಿ ತೊಡಗಿದ್ದ.
ದೆಹಲಿಯಲ್ಲಿ ಆತನ ವಿರುದ್ಧ ದಾಖಲಾಗಿರುವ ಪ್ರಕರಣದ ಹೊರತಾಗಿ, ಭೂಸಾವಲ್‌ನಲ್ಲಿ ಹನೀಫ್ ಶೇಖ್ ವಿರುದ್ಧ ನಾಲ್ಕು ಎಫ್‌ಐಆರ್‌ಗಳಿವೆ. ಪೊಲೀಸರು ಈಗ ಹನೀಫ್ ಶೇಖ್‌ನನ್ನು ಮಹಾರಾಷ್ಟ್ರ, ಗುಜರಾತ್ ಮತ್ತು ಉತ್ತರ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಇತರ ಭಯೋತ್ಪಾದಕ ಚಟುವಟಿಕೆಗಳಲ್ಲಿ ಆತನ ಪಾತ್ರದ ಬಗ್ಗೆ ತನಿಖೆ ನಡೆಸಲಿದ್ದಾರೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement