ಕಲಬುರಗಿ : ಬಿಜೆಪಿಯ ಮೂವರು ಹಾಲಿ ಸಂಸದರು ನಮ್ಮ ಸಂಪರ್ಕದಲ್ಲಿದ್ದು, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದರ ಬಗ್ಗೆ ಮಾತನಾಡಿದ್ದಾರೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಕಲ್ಬುರಗಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಮ್ಮ ಜೊತೆ ಯಾವ್ಯಾವ ಸಂಸದರು ಸಂಪರ್ಕದಲ್ಲಿದ್ದಾರೆ ಎಂಬ ಬಗ್ಗೆ ನಾನು ಈಗಲೇ ಮಾಹಿತಿ ಬಹಿರಂಗಪಡಿಸುವುದಿಲ್ಲ. ನಮ್ಮ ಪಕ್ಷ ಹಾಗೂ ಸಿದ್ಧಾಂತ ಒಪ್ಪಿ ಬರುವುದಾದರೆ ಸ್ವಾಗತ ಎಂದು ಅವರಿಗೆ ಹೇಳಿದ್ದೇನೆ. ಇನ್ನೂ ಹಲವು ಮುಖಂಡರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 20 ಸೀಟ್ ಗೆಲ್ಲುವುದು ನಿಶ್ಚಿತ ಎಂದ ಅವರು, ಬಿಜೆಪಿಯವರು ಹಾಲಿ 10 ಸಂಸದರನ್ನು ಬದಲಾವಣೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಜಯದೇವ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಎಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ, ಅವರ ಮನೆಯವರು, ಅವರ ಮಗನ ಸ್ಪರ್ಧೆಯನ್ನೂ ನೋಡಿದ್ದೇವೆ. ಡಿ.ಕೆ. ಸುರೇಶ್ ಅವರಿಗೆ ಚುನಾವಣೆ ಎದುರಿಸುವುದು ಗೊತ್ತಿದೆ ಎಂದರು.
ಸಿ.ಎನ್. ಮಂಜುನಾಥ್ ಅವರನ್ನು ನಮ್ಮ ಸರ್ಕಾರವೂ ಜಯದೇವದಲ್ಲಿ ನಿರ್ದೇಶಕರನ್ನಾಗಿ ಮುಂದುವರೆಸಿತ್ತು. ಅವರು ಸ್ಪರ್ಧಿಸಿದರೆ ಸ್ವಾಗತ ಎಂದು ತಿಳಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ