ಸಿಎಎ : ಮಾರ್ಚ್ 19 ರಂದು ಪೌರತ್ವ (ತಿದ್ದುಪಡಿ) ನಿಯಮಗಳ ವಿರುದ್ಧದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ನವದೆಹಲಿ: 2019 ರ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ಇತ್ತೀಚೆಗೆ ಸೂಚಿಸಲಾದ 2024 ರ ಪೌರತ್ವ (ತಿದ್ದುಪಡಿ) ನಿಯಮಗಳಿಗೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ಮಾರ್ಚ್ 19ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ (CJI) ಡಿ.ವೈ. ಚಂದ್ರಚೂಡ ನೇತೃತ್ವದ ಪೀಠವು ಎಲ್ಲ ಅರ್ಜಿಗಳನ್ನು ವಿಚಾರಣೆ ನಡೆಸಲಿದೆ ಎಂದು ಹೇಳಿದೆ.
“ಇದನ್ನು ಮಂಗಳವಾರ ವಿಚಾರಣೆ ಮಾಡುತ್ತೇವೆ. 190 ಪ್ಲಸ್ ಪ್ರಕರಣಗಳಿವೆ. ಅವೆಲ್ಲವನ್ನೂ ಆಲಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಪರ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಇಂದು, ಶುಕ್ರವಾರ ಈ ವಿಷಯವನ್ನು ಪ್ರಸ್ತಾಪಿಸಿದ ನಂತರ ನ್ಯಾಯಾಲಯವು ಹೀಗೆ ಹೇಳಿದೆ. ಸಿಎಎಯನ್ನು ಪ್ರಶ್ನಿಸಿದ ಅರ್ಜಿದಾರರಲ್ಲಿ ಐಯುಎಂಎಲ್ ಕೂಡ ಒಂದು.

2019 ರಲ್ಲಿ ಸಿಎಎ ಅಂಗೀಕಾರವಾದಾಗ, ನಿಯಮಗಳಿಗೆ ಅಧಿಸೂಚನೆ ಹೊರಡಿಸದ ಕಾರಣ ತಡೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸಿಬಲ್ ನ್ಯಾಯಾಲಯಕ್ಕೆ ತಿಳಿಸಿದರು. “ಆದರೆ ಈಗ (ಲೋಕಸಭಾ) ಚುನಾವಣೆಗೆ ಮುನ್ನ, ನಿಯಮಗಳನ್ನು ಅಧಿಸೂಚನೆ ಮಾಡಲಾಗಿದೆ. ದಯವಿಟ್ಟು ಅದನ್ನು ಪಟ್ಟಿ ಮಾಡಿ. ಈಗ ಪೌರತ್ವವನ್ನು ನೀಡಿದರೆ, ಅದನ್ನು ಹಿಂಪಡೆಯಲು ಸಾಧ್ಯವಿಲ್ಲ” ಎಂದು ಅವರು ನ್ಯಾಯಾಲಯವನ್ನು ಒತ್ತಾಯಿಸಿದರು.
ಆದರೆ, ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಸುಪ್ರೀಂ ಕೋರ್ಟ್ ಸಾಂವಿಧಾನಿಕ ನ್ಯಾಯಾಲಯವಾಗಿದ್ದು, ಚುನಾವಣೆಗೆ ಮುನ್ನ ನಿಯಮಗಳನ್ನು ಅಧಿಸೂಚನೆ ಹೊರಡಿಸಿರುವುದು ಅಪ್ರಸ್ತುತವಾಗಿದೆ ಎಂದು ತಿಳಿಸಿದರು. “ಅರ್ಜಿದಾರರಿಗೆ ಪೌರತ್ವದ ಬಗ್ಗೆ ಏನನ್ನೂ ಹೇಳಲು ಯಾವುದೇ ಕಾರಣ ಸಿಗುತ್ತಿಲ್ಲ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಕೇಜ್ರಿವಾಲ್ ವಿರುದ್ಧ ಎನ್‌ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಶಿಫಾರಸು: ಇದು ಬಿಜೆಪಿಯ ಮತ್ತೊಂದು ಪಿತೂರಿ ಎಂದ ಎಎಪಿ

ಆದಾಗ್ಯೂ, ಮಾರ್ಚ್ 19, ಮಂಗಳವಾರದಂದು ವಿಷಯವನ್ನು ಪಟ್ಟಿ ಮಾಡಲು ಸಿಜೆಐ ಒಪ್ಪಿಕೊಂಡರು.
ಡಿಸೆಂಬರ್ 11, 2019 ರಂದು ಸಿಎಎ ಅನ್ನು ಸಂಸತ್ತು ಅಂಗೀಕರಿಸಿತು ಮತ್ತು ಮರುದಿನ ರಾಷ್ಟ್ರಪತಿಗಳ ಒಪ್ಪಿಗೆಯನ್ನು ಪಡೆಯಿತು. ಅದೇ ದಿನ, ಐಯುಎಂಎಲ್ ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತು. ನಂತರ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾದವು.
ಸಿಎಎ ಮತ್ತು ನಿಯಮಗಳು ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಡಿಸೆಂಬರ್ 31, 2014 ರಂದು ಅಥವಾ ಮೊದಲು ದಾರ್ಮಿಕ ದೌರ್ಜನ್ಯದ ಕಾರಣಕ್ಕೆ ಭಾರತಕ್ಕೆ ಆಗಮಿಸಿದ ಹಿಂದೂಗಳು, ಜೈನರು, ಕ್ರಿಶ್ಚಿಯನ್ನರು, ಸಿಖ್ಖರು, ಬೌದ್ಧರು ಮತ್ತು ಪಾರ್ಸಿಗಳಿಗೆ ಪೌರತ್ವವನ್ನು ನೀಡುವ ಉದ್ದೇಶವನ್ನು ಹೊಂದಿವೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement