ಸಚಿವರಾಗಿ ಪೊನ್ಮುಡಿ ನೇಮಿಸಲು ರಾಜ್ಯಪಾಲ ಆರ್.ಎನ್.ರವಿ ನಿರಾಕರಣೆ ; ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ತಮಿಳುನಾಡು ಸರ್ಕಾರ

ನವದೆಹಲಿ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಶಿಫಾರಸಿನಂತೆ ಡಿಎಂಕೆಯ ಹಿರಿಯ ನಾಯಕ ಕೆ ಪೊನ್ಮುಡಿ ಅವರನ್ನು ಸಚಿವರನ್ನಾಗಿ ನೇಮಿಸಲು ರಾಜ್ಯಪಾಲ ಆರ್.ಎನ್. ರವಿ ಅವರು ನಿರಾಕರಿಸಿದ್ದು, ಇದನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿರುವ ಮನವಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್‌ ಸೋಮವಾರ ಸಮ್ಮತಿಸಿದೆ.
ರಾಜ್ಯಪಾಲರು ಇತ್ತೀಚೆಗೆ ಮಾಜಿ ಉನ್ನತ ಶಿಕ್ಷಣ ಸಚಿವರ ಪೊನ್ಮುಡಿ ಅವರನ್ನು ರಾಜ್ಯ ಸಚಿವ ಸಂಪುಟಕ್ಕೆ ಮರು ಸೇರ್ಪಡೆಗೊಳಿಸುವುದು ಸಾಂವಿಧಾನಿಕ ನೈತಿಕತೆಗೆ ವಿರುದ್ಧವಾಗಿದೆ ಎಂದು ಹೇಳಿ ನೇಮಕಗೊಳಿಸಲು ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ ಮಿಶ್ರಾ ಅವರನ್ನೊಳಗೊಂಡ ಪೀಠವು, ತಮಿಳುನಾಡು ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ ಸಿಂಘ್ವಿ ಅವರ ಮನವಿಯನ್ನು ಪರಿಗಣಿಸಿದೆ.
ಪೊನ್ಮುಡಿ ನೇಮಕ ಕುರಿತು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರಿಗೆ ಪತ್ರ ಬರೆದಿರುವ ರಾಜ್ಯಪಾಲ ಆರ್.ಎನ್. ಅವರು, ಪೊನ್ಮುಡಿಗೆ ಶಿಕ್ಷೆ ವಿಧಿಸಿ ಹೈಕೋರ್ಟ್ ಆದೇಶ ನೀಡಿತ್ತು. ಆದರೆ ಸುಪ್ರೀಂ ಕೋರ್ಟ್, ಪೊನ್ಮುಡಿ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು ಮಧ್ಯಂತರ ಆದೇಶ ನೀಡಿದೆ. ಶಿಕ್ಷೆಗೆ ತಡೆ ನೀಡಿಲ್ಲ ಎಂದು ಉಲ್ಲೇಖಿಸಿದ್ದರು.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಇತ್ತೀಚಿಗೆ ಸುಪ್ರೀಂ ಕೋರ್ಟ್ ಪೊನ್ಮುಡಿ ಶಿಕ್ಷೆಯನ್ನು ಅಮಾನತುಗೊಳಿಸಿತ್ತು. ಅದರ ನಂತರ ಅವರನ್ನು ಪುನಃ ಸಚಿವರನ್ನಾಗಿ ನೇಮಕ ಮಾಡುವಂತೆ ರಾಜ್ಯಪಾಲರಿಗೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ಶಿಫಾರಸು ಮಾಡಿದ್ದರು.

ಪ್ರಮುಖ ಸುದ್ದಿ :-   ನೆಲಮಂಗಲ ಬಳಿ ರಸ್ತೆ ಜಗಳ-ಹಲ್ಲೆ ಆರೋಪ: ಮಾಜಿ ಸಂಸದ ಅನಂತಕುಮಾರ ಹೆಗಡೆ ಸೇರಿ ಮೂವರ ವಿರುದ್ಧ ಎಫ್‌ಐಆರ್‌

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement