ವೀಡಿಯೊ…| ಬೆಂಗಳೂರು : ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ನೆಲಕ್ಕುರುಳಿದ 120 ಅಡಿ ಎತ್ತರದ ತೇರು

ಬೆಂಗಳೂರು : ಬೆಂಗಳೂರು ಜಿಲ್ಲೆಯ ಆನೇಕಲ್ ತಾಲೂಕಿನ ಹೀಲಲಿಗೆ ಗ್ರಾಮದಲ್ಲಿ ನೂರಾರು ವರ್ಷಗಳ ಇತಿಹಾಸವಿರುವ ಪ್ರಸಿದ್ಧ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ಸುಮಾರು 120 ಅಡಿ ಉದ್ದದ ತೇರು ನೆಲಕ್ಕುರುಳಿದ ಘಟನೆ ನಡೆದಿದೆ.
ಹತ್ತಾರು ಗ್ರಾಮಗಳಿಂದ ಮದ್ದೂರಮ್ಮ ಜಾತ್ರೆಗೆ ಎತ್ತುಗಳು, ಟ್ರ್ಯಾಕ್ಟರ್​ಗಳ ಮೂಲಕ ತೇರು ಎಳೆದುಕೊಂಡು ಬರಲಾಗುತ್ತದೆ. ಹೀಲಲಿಗೆ ಗ್ರಾಮದಿಂದ ಹುಸ್ಕೂರಿಗೆ ತೇರು ಬರುತ್ತಿರುವಾಗ ಕಮ್ಮಸಂದ್ರದ ಹೈಪರ್ ಮಾರ್ಕೆಟ್ ತಿರುವಿನಲ್ಲಿ ಎಡಭಾಗಕ್ಕೆ ವಾಲಿದ ತೇರು ನಿಧಾನವಾಗಿ ಬಾಗುತ್ತ ನೆಲಕ್ಕೆ ಅಪ್ಪಳಿಸಿದೆ.

ಆನೇಕಲ್ ತಾಲೂಕಿನ ಹೀಲಲಿಗೆಯಿಂದ ಹುಸ್ಕೂರಿಗೆ ಸುಮಾರು 70 ಎತ್ತುಗಳು ಹಾಗೂ ಟ್ರ್ಯಾಕ್ಟರ್ ಮೂಲಕ ತೇರನ್ನು ಎಳೆದುಕೊಂಡು ಹೋಗಲಾಗುತ್ತಿತ್ತು. ರಥವು ಹೆಚ್ಚು ಎತ್ತರದಲ್ಲಿದ್ದ ಕಾರಣ ನಿಯಂತ್ರಣ ತಪ್ಪಿ ತೇರು ಕುಸಿದು ಬಿದ್ದಿದೆ ಎಂದು ಹೇಳಲಾಗಿದೆ. ಅದೃಷ್ಟವಶಾತ್ ಘಟನೆಯಿಂದ ಯಾವುದೇ ಸಾವುನೋವು ಸಂಭವಿಸಿಲ್ಲ. 2018ರಲ್ಲಿಯೂ ಮದ್ದೂರಮ್ಮ ಜಾತ್ರೆಯಲ್ಲಿ ತೇರು ಕುಸಿದು ಬಿದ್ದಿತ್ತು.
ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿಯಿಂದ 5 ಕಿ.ಮೀ. ದೂರದಲ್ಲಿರುವ ಹುಸ್ಕೂರು ಮದ್ದೂರಮ್ಮನ ಜಾತ್ರೆಗೆ ನೂರಾರು ವರ್ಷಗಳ ಇತಿಹಾಸವಿದೆ. ಈ ದೇವಾಲಯವನ್ನು ಚೋಳ ರಾಜರು ನಿರ್ಮಿಸಿದ್ದಾರೆ ಎಂಬ ಐತಿಹ್ಯವಿದೆ.

ಪ್ರಮುಖ ಸುದ್ದಿ :-   ಮಹಿಳೆ ಅಪಹರಣ ಪ್ರಕರಣ ; ಎಚ್‌.ಡಿ. ರೇವಣ್ಣ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿ ವಜಾ : ಬಂಧನದ ಭೀತಿ

ಪ್ರತಿ ವರ್ಷ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಮದ್ದೂರಮ್ಮನ ಜಾತ್ರೆ ನಡೆಯುತ್ತದೆ. ಹುಸ್ಕೂರಿನ ಮದ್ದೂರಮ್ಮ ದೇವಸ್ಥಾನಕ್ಕೆ ಸುತ್ತಲಿನ 10ಕ್ಕೂ ಅಧಿಕ ಗ್ರಾಮಗಳಿಂದ ತೇರನ್ನು ತೆಗೆದುಕೊಂಡು ಬರಲಾಗುತ್ತದೆ. ಇಲ್ಲಿನ ಗ್ರಾಮೀಣ ಭಾಗದ ಜನರು ಅತಿ ಎತ್ತರದ ತೇರುಗಳನ್ನು ನಿರ್ಮಿಸಿಕೊಂಡು ಬಂದು ಮದ್ದೂರಮ್ಮನಿಗೆ ಅರ್ಪಣೆ ಮಾಡುತ್ತಾರೆ. ಈ ವರ್ಷ ಹೀಲಲಿಗೆಯಿಂದ ಎತ್ತುಗಳು ಹಾಗೂ ಟ್ರ್ಯಾಕ್ಟರ್‌ಗಳ ಮೂಲಕ ಎಳೆದುಕೊಂಡು ಹೋಗುತ್ತಿದ್ದ 120 ಅಡಿ ಎತ್ತರದ ತೇರು ನೋಡ ನೋಡುತ್ತಿದ್ದಂತೆ ವಾಲಿಕೊಂಡು ಕುಸಿದು ಬಿದ್ದಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement